ದಾವಣಗೆರೆ, ಅ.1- ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದರೆ ನಮ್ಮ ದೇಶದಲ್ಲಿ ರಕ್ತದ ಕೊರತೆ ನೀಗಿಸಲು ಸಾಧ್ಯ ಎಂದು ಲೈಫ್‍ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ಅಭಿಪ್ರಾಯಪಟ್ಟರು.
ಪ್ರತಿ ದಿನ ರಕ್ತಹೀನತೆಯಿಂದ ಇರುವ ಗರ್ಭಿ ಣಿಯರಿಗೆ, ಅಪಘಾತ ಹೊಂದಿದವರಿಗೆ, ಕ್ಯಾನ್ಸರ್ ರೋಗಿಗಳಿಗೆ, ರಕ್ತದ ಕಾಯಿಲೆ ಇರುವವರಿಗೆ ರಕ್ತದ ಅವಶ್ಯಕತೆ ಬಹಳ ಇದೆ. ರಕ್ತ ತಯಾರು ಮಾಡಲು ಬಿಟ್ಟಿದ್ದರೆ ರಕ್ತವನ್ನು ಕೊಂಡುಕೊಳ್ಳು ತ್ತಿದ್ದರು. ಆಗ ಮನುಷ್ಯರ ನಡುವಿನ ಬಾಂಧವ್ಯ ಬೆಳೆಯುತ್ತಿರಲಿಲ್ಲ. ಅದಕ್ಕಾಗಿಯೇ ದೇವರು ರಕ್ತವನ್ನು ಸೃಷ್ಠಿ ಮಾಡಿಲ್ಲವೆಂದರು.
ಆರೋಗ್ಯವಂತ 18 ವರ್ಷ ಮೇಲ್ಪಟ್ಟ 60 ವರ್ಷ ವಯಸ್ಸಿನ ಪ್ರತಿಯೊಬ್ಬರೂ ಸಹ ರಕ್ತ ದಾನ ಮಾಡಬೇಕು. ಒಬ್ಬರು ನೀಡಿದ ಒಂದು ಯುನಿಟ್ ರಕ್ತದಿಂದ 4 ಜನರ ಜೀವ ಉಳಿಸಲು ಸಹಕಾರಿ. ಅಲ್ಲದೇ ರಕ್ತದಾನ ಮಾಡಿದ ಖುಷಿ ಜೊತೆಗೆ ತಾವೂ ಸಹ ಆರೋಗ್ಯವಂತರಾಗಿರಲು ಸಾಧ್ಯ ಎಂದು ತಿಳಿಸಿದರು.
ಲೈಫ್ ಲೈನ್ ಸಂಸ್ಥೆ ಕಾರ್ಯದರ್ಶಿ ಅನಿಲ್ ಬಾರೆಂಗಳ್ ಮಾತನಾಡಿ, ಪ್ರತಿ ವರ್ಷ ವಿಭಿನ್ನವಾಗಿ ರಕ್ತದಾನ ದಿನಾಚರಣೆ ಆಚರಿಸುತ್ತಾ ಬಂದಿದ್ದು, ಈ ವರ್ಷ ಸೈಕಲ್ ಜಾಥಾ ಮೂಲಕ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕು. ಕೋವಿಡ್‍ನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದರೆ ಅದನ್ನು ಕೋವಿಡ್ ರೋಗಿಗಳಿಗೆ ನೀಡುವುದರಿಂದ ಅವರುಗಳ ಜೀವ ಉಳಿಸಲು ಸಹಕಾರಿ ಎಂದು ಹೇಳಿದರು.
ಜಾಥಾದಲ್ಲಿ ಡಾ. ದೇವೇಂದ್ರಪ್ಪ, ಡಾ. ಎ.ಎಂ. ಶಿಲ್ಪಾಶ್ರೀ, ಶೇಷಾಚಲ, ಮಾಧವ ಪದಕಿ, ಪ್ರಹ್ಲಾದ ಭಟ್, ಸಂತೋಷ ಗಾಯಕವಾಡ್, ಪೃಥ್ವಿ ಬಾದಾಮಿ, ಇನಾಯತ್‍ವುಲ್ಲಾ, ವಾಸುದೇವ ರಾಯ್ಕರ್, ಗೋಪಾಲಕೃಷ್ಣ, ಡಿಎಸ್ ಸಾಗರ್, ವಸಂತರಾಜು, ಮೋಹನ ಕುಮಾರ, ಡಾ.ಸುನಿಲ್, ಡಾ.ಹರೀಶ, ಪುರುಷೋತ್ತಮ ಸೇರಿದಂತೆ ಸಮೂಹದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.