ಹರಪನಹಳ್ಳಿ, ಜೂ.28- ಖಾಸಗಿ ಬಸ್ಗಳನ್ನು ಜುಲೈ 6ರವರೆಗೆ ರಸ್ತೆಗೆ ಇಳಿಸದಂತೆ ಖಾಸಗಿ ಬಸ್ ಮಾಲೀಕರ ಸಂಘ ತೀರ್ಮಾನಿಸಿದೆ ಎಂದು ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕಂಭತ್ತಹಳ್ಳಿ ಎಸ್.ಮಂಜುನಾಥ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಚರ್ಚಿಸಿದಂತೆ ಮುಂದಿನ ಆರು ತಿಂಗಳು ಖಾಸಗಿ ಬಸ್ಗಳಿಗೆ ತೆರಿಗೆ ರಿಯಾಯಿತಿ ನೀಡಬೇಕು ಹಾಗೂ ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯುರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ತಮ್ಮ ಮನವಿಗೆ ಸಿಎಂ ಹೇಗೆ ಸ್ಪಂದಿಸುತ್ತಾರೆ ಎಂದು ಅರಿತುಕೊಂಡು ಬಸ್ಗಳನ್ನು ಓಡಿಸಲು ನಿರ್ಧರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕಾರ್ಯದರ್ಶಿ ಎಂ.ಆರ್. ಸತೀಶ್, ಖಜಾಂಚಿ ಹೆಚ್.ಎಸ್.ಮಹೇಶ್, ನಿರ್ದೇಶಕ ಎಂ.ಎನ್. ಹರೀಶ್ ಹಾಗೂ ಇತರರು ಹಾಜರಿದ್ದರು.