ಶಾಸಕ-ಸಂಸದರ `ಜಲ ಜಗಳ’

ಶಾಸಕ-ಸಂಸದರ `ಜಲ ಜಗಳ' - Janathavani
ಶಾಸಕ-ಸಂಸದರ `ಜಲ ಜಗಳ' - Janathavani

ದಾವಣಗೆರೆ, ಮೇ 9- ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದು, ಏಕ ವಚನದ ಪ್ರಯೋಗದ ಜೊತೆಗೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋದ ಘಟನೆ ನಡೆಯಿತು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ  ನಡೆದ ಈ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೇರಿದಂತೆ ಸ್ಥಳೀಯ ಶಾಸಕರು, ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು.

ತಾಲ್ಲೂಕಿನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದ್ದು, ಉಚಿತವಾಗಿ ನೀರು ನೀಡಬೇಕೆಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಭೆಯಲ್ಲಿ ಚರ್ಚಿಸುತ್ತಿರುವಾಗ, ಸಂಸದ ಸಿದ್ದೇಶ್ವರ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಿ ಹೆಚ್ಚುವರಿ ಹಣ ಕೊಡಿಸಿ ಆಗ ಏನಾದರೂ ಮಾಡಲು ಸಾಧ್ಯ. ಎಲ್ಲವೂ ಪುಕ್ಸಟ್ಟೆ ಬೇಕು ಎಂದರೆ ಹೇಗೆ? ಎಂದು ವಿರೂಪಾಕ್ಷಪ್ಪ ಅವರನ್ನು ಪ್ರಶ್ನಿಸಿದರು.

ಆಗ ಶಾಸಕರು, ನಾನು ನಿಮ್ಮನ್ನು ಕೇಳುತ್ತಿಲ್ಲ, ಸರ್ಕಾರವನ್ನು ಕೇಳುತ್ತಿದ್ದೇನೆ ಎಂದು ಸಂಸದರಿಗೆ ಮರು ಉತ್ತರ ನೀಡಿದಾಗ, ಮಾತುಗಳು ಏಕವಚನಕ್ಕೆ ತಿರುಗಿ ಇಬ್ಬರು ಕುರ್ಚಿಯಿಂದ ಎದ್ದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೊರಟರು. ಕೂಡಲೇ ಎಸ್ಪಿ ಹನುಮಂತರಾಯ ಅವರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು. 

ಸಭೆ ಮುಗಿದು ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ಹೋಗುವಾಗಲೂ ಎದುರಾದ ಸಿದ್ದೇಶ್ವರ ಹಾಗೂ ಮಾಡಾಳು ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆಯುವ ಹಂತದಲ್ಲಿತ್ತು. ಆ ವೇಳೆ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರು ಇಬ್ಬರನ್ನೂ ಸಮಾಧಾನಪಡಿಸಿ, ವಿರೂಪಾಕ್ಷಪ್ಪ ಅವರನ್ನು ಕಾರು ಹತ್ತಿಸಿ ಕಳುಹಿಸಿದರು.

ಸ್ವ ಪಕ್ಷದವರೇ ಆದ ಇಬ್ಬರು ಜನಪ್ರತಿನಿಧಿಗಳು ವೇದಿಕೆ ಮೇಲೆ ನಡೆಸಿದ ಈ ರೀತಿ ಏಕ ವಚನದ ಜಗಳ ಪಕ್ಷದ ಮುಜುಗರಕ್ಕೂ ಕಾರಣವಾಗಿದೆ.

error: Content is protected !!