ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ

ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ ಜಾರಿಗಾಗಿ ಸುಪ್ರೀಂ ನೋಟಿಸ್‌

ನವದೆಹಲಿ, ಜು. 27 – ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್‌ ಕಾಯ್ದೆ ಅನ್ವಯ ಎಲ್ಲಾ ನಾಗರಿಕರಿಗೆ ಏಕರೂಪದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ದಾಖ ಲಿಸಲಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳಿಸಲಾಗಿದೆ. 2010ರಲ್ಲಿ ಜಾರಿಗೆ ತರಲಾದ ಈ ಕಾಯ್ದೆಯ ಎಲ್ಲ ಅಂಶಗಳನ್ನು ಜಾರಿಗೆ ತರಬೇಕು ಎಂದು ಅರ್ಜಿ ದಾಖಲಿಸಲಾಗಿದೆ. ಈ ಕಾಯ್ದೆಯ ಅನ್ವಯ ಎಲ್ಲರಿಗೂ ಕೈಗೆಟಕುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಿದೆ.

ಜನ ಸ್ವಾಸ್ಥ್ಯ ಅಭಿಯಾನ, ಪೇಷೆಂಟ್ಸ್ ರೈಟ್ಸ್ ಕ್ಯಾಂಪೇನ್ ಹಾಗೂ ಕೆ.ಎಂ. ಗೋಪಕುಮಾರ್ ಅವರು ಕಾಯ್ದೆ ಜಾರಿಗಾಗಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠ ವಿಚಾರಣೆಗೆ ಒಳಪಡಿಸಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ಹಲವಾರು ಸಮಿತಿಗಳು ಶಿಫಾರಸ್ಸು ಮಾಡಿದ ನಂತರ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ (ಸಿ.ಇ.ಎ.) ಜಾರಿಗೆ ತರಲಾಗಿತ್ತು. ರಾಷ್ಟ್ರೀಯ ಆರೋಗ್ಯ ನೀತಿಯ ಅನ್ವಯ ಆರೋಗ್ಯ ಸೇವೆಯ ಮಾನದಂಡಗಳನ್ನು ನಿಗದಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಕಾಯ್ದೆಯ ಅನ್ವಯ ಚಿಕಿತ್ಸಾ ಸಂಸ್ಥೆಗಳು ಹೊಂದಬೇಕಿರುವ ಕನಿಷ್ಠ ಮಾನದಂಡಗಳ ಬಗ್ಗೆ ಅಧಿಸೂಚನೆ ಹೊರಡಿಸಬೇಕು. ಸೇವೆಗಳ ದರದ ಬಗ್ಗೆ ಪ್ರಕಟಣೆ ಇರಬೇಕು ಎಂದೂ ಸಹ ಅರ್ಜಿಯಲ್ಲಿ ಕೋರಲಾಗಿದೆ.

ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಹಂತದಲ್ಲಿ ರೋಗಿಗಳ ದೂರುಗಳನ್ನು ಬಗೆಹರಿಸುವ ವ್ಯವಸ್ಥೆ ರೂಪಿಸಬೇಕು. ಸಂವಿಧಾನದ 47ನೇ ವಿಧಿಯ ಅನ್ವಯ ಆರೋಗ್ಯ ಸೇವೆ ಸರ್ಕಾರದ ಕರ್ತವ್ಯ. ಆದರೆ, ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಶೇ.30ರಷ್ಟು ರೋಗಿಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ಉಳಿದವರು ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಲಾಗಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯ ಹಾಗೂ ಮಾನವ ಸಂಪನ್ಮೂಲಗಳಿಲ್ಲದೇ ಸಮಸ್ಯೆಯಾಗಿದೆ. ಔಷಧಗಳೂ ಲಭ್ಯವಾಗುತ್ತಿಲ್ಲ, ಸಾರ್ವಜನಿಕ ಹೂಡಿಕೆಯೂ ಇಲ್ಲ. ಇದರಿಂದಾಗಿ ಚಿಕಿತ್ಸೆಗೆ ಖಾಸಗಿ ವಲಯವನ್ನು ಅವಲಂಬಿಸುವಂತಾಗಿದೆ ಎಂದು ತಿಳಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಸೇವಾ ವಲಯದಲ್ಲಿ ಸೂಕ್ತ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ. ಸಾಕಷ್ಟು ಬಜೆಟ್ ನೆರವು ನೀಡಬೇಕಿದೆ. ಸಾಮಾನ್ಯ ಸಮಯದಲ್ಲಷ್ಟೇ ಅಲ್ಲದೇ, ಕೊರೊನಾದಂತಹ ತುರ್ತು ಸಂದರ್ಭದಲ್ಲೂ ಈ ಸೌಲಭ್ಯಗಳು ಲಭ್ಯವಾಗಬೇಕು ಎಂದು ಕೋರಲಾಗಿದೆ.

ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ ಆಕ್ಟ್ ಜಾರಿಗೆ ತಂದಲ್ಲಿ ಅದು ಸರ್ಕಾರಿ ಹಾಗೂ ಖಾಸಗಿ ವಲಯಗಳೆರಡಕ್ಕೂ ಅನ್ವಯವಾಗಲಿದೆ. ಇದರಿಂದಾಗಿ ಖಾಸಗಿ ವಲಯದಲ್ಲಿ ನೀಡಲಾಗುವ ಚಿಕಿತ್ಸೆಯ ಮೇಲೂ ಸ್ವಲ್ಪ ಮಟ್ಟಿನ ನಿಯಂತ್ರಣ ಸಾಧ್ಯವಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

error: Content is protected !!