ಸಿಎಂ ಗಾದಿಗೆ ಬೊಮ್ಮಾಯಿ

ಸಿಎಂ ಗಾದಿಗೆ ಬೊಮ್ಮಾಯಿ - Janathavaniರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕಾರ

ಬೆಂಗಳೂರು, ಜು.27 – ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ನಾಳೆ ಬುಧವಾರ ಅವರು ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೈಕಮಾಂಡ್ ಒತ್ತಾಯದಂತೆ ಮುಖ್ಯ ಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರೂ ಸಹ, ತಮ್ಮ ಆಪ್ತನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರುವುದ ರೊಂದಿಗೆ ಮೇಲುಗೈ ಸಾಧಿಸಿ, ತಮ್ಮ ವಿರೋಧಿ ಬಣದ ಬಾಯಿ ಮುಚ್ಚಿಸಿದ್ದಾರೆ.

ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ವರಿಷ್ಠರು ಕಳುಹಿಸಿದ್ದ ಲಕೋಟೆಯಲ್ಲಿ ಬಂದಿದ್ದ ಬಸವರಾಜ್ ಬೊಮ್ಮಾಯಿ ಹೆಸರನ್ನು ಸಭೆಯಲ್ಲಿ ಬಹಿರಂಗ ಪಡಿಸಿದರು.

ಇದಾದ ನಂತರ ಪ್ರಧಾನ್ ಅವರು ಬೊಮ್ಮಾಯಿ ಅವರನ್ನು ವೇದಿಕೆಗೆ ಕರೆದು, ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.

ಸಭೆಯ ನಂತರ ಹೇಳಿಕೆ ನೀಡಿರುವ ಪ್ರಧಾನ್, ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೊಮ್ಮಾಯಿ ಹೆಸರು ಪ್ರಸ್ತಾಪಿಸಿದರು. ಇದಕ್ಕೆ ಶಾಸಕರಾದ ಗೋವಿಂದ ಕಾರಜೋಳ, ಆರ್. ಅಶೋಕ, ಕೆ.ಎಸ್. ಈಶ್ವರಪ್ಪ. ಬಿ. ಶ್ರೀರಾಮುಲು, ಎಸ್.ಟಿ ಸೋಮಶೇಖರ, ಪೂರ್ಣಿಮ ಶ್ರೀನಿವಾಸ ಅನುಮೋದಿಸಿದರು ಎಂದು ತಿಳಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ನಂತರ ಬೊಮ್ಮಾಯಿ, ಯಡಿಯೂರಪ್ಪನವರ ಕಾಲಿಗೆ ಬಿದ್ದು, ನಮಸ್ಕರಿಸಿ, ತಮ್ಮ ಸಹೋ ದ್ಯೋಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ಇದಾದ ನಂತರ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಪತ್ರವನ್ನು ರಾಜ್ಯಪಾಲ ಗೆಹ್ಲೋಟ್ ಅವರಿಗೆ ನೀಡಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಗೊಂಡ ಬಸವರಾಜ್ ಬೊಮ್ಮಯಿ ಅವರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯಪಾಲರು, ನಾಳೆ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನ ನೀಡಿದರು. ಅದರಂತೆ, ಬೆಳಿಗ್ಗೆ 11 ಗಂಟೆಗೆ ಬೊಮ್ಮಾಯಿ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದಕ್ಕೂ ಮುಂಚೆ, ಸಂಘ ಪರಿವಾರದ ಮೂಲದ ಹಲವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿತ್ತು. ಶಾಸಕರಾದ ಸಿ.ಟಿ. ರವಿ, ಸುನೀಲ್ ಕುಮಾರ್ ಹಾಗೂ ಅರವಿಂದ ಬೆಲ್ಲದ್ ಹೆಸರನ್ನು ಹೈಕಮಾಂಡ್ ಪರಿಗಣಿಸಿತ್ತು ಎಂದು ಮೂಲಗಳು ತಿಳಿಸಿವೆ.

ಆದರೆ, ಯಡಿಯೂರಪ್ಪ ಈ ಪ್ರಸ್ತಾಪಕ್ಕೆ ಸಮ್ಮತಿಸಲಿಲ್ಲ. ಅಂತಿಮವಾಗಿ ಯಡಿಯೂರಪ್ಪ ಅವರ ಆಪ್ತರಾದ ಬೊಮ್ಮಾಯಿ ಹೆಸರನ್ನು ಹೈಕಮಾಂಡ್ ಪ್ರಸ್ತಾಪಿಸಿತು. ಆಗ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ವಚ್ಛ ಹಾಗೂ ವಿವಾದ ರಹಿತ ವರ್ಚಸ್ಸು ಹೊಂದಿರುವ ಬೊಮ್ಮಾಯಿ, ಯಡಿಯೂರಪ್ಪ ಆಪ್ತರೆಂದು ಗುರುತಿಸಲ್ಪಟ್ಟಿದ್ದಾರೆ. ಇದರೊಂದಿಗೆ ಯಡಿಯೂರಪ್ಪ ನಂತರ ಯಾರು ಎಂಬ ತಿಂಗಳುಗಳ ಕಾಲ ನಡೆದ ಚರ್ಚೆಗೆ ತೆರೆ ಬಿದ್ದಂತಾಗಿದೆ.

ಜನತಾಪರಿವಾರ ಮೂಲದಿಂದ ಬಂದ ಬಸವರಾಜ್ ಬೊಮ್ಮಾಯಿ, ಹಾವೇರಿ ಶಿಗ್ಗಾವಿ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಗೊಂಡಿದ್ದರು.

ಈ ಹಿಂದೆ ಯಡಿಯೂರಪ್ಪ ಮತ್ತು ಸದಾನಂದಗೌಡರ ಸಂಪುಟದಲ್ಲಿ ನೀರಾವರಿ, ಗೃಹ, ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಬಲಗೈ ಆಗಿ ಕೆಲಸ ನಿರ್ವಹಿಸಿ, ಅವರ ಮಾರ್ಗದರ್ಶನದಲ್ಲೇ ನಡೆದಿದ್ದರು. ಇದಕ್ಕೆ ಪ್ರತಿಫಲ ದೊರೆತಿದೆ.

error: Content is protected !!