ಡಾ. ಕೆ.ಮರುಳಸಿದ್ದಪ್ಪ ಬಸವರಾಜ ಸ್ವಾಮಿ, ಪ್ರೊ. ಹೆಚ್.ಲಿಂಗಪ್ಪ ಮತ್ತು ಶ್ರೀಮತಿ ರೂಪಾ ಡಿ.ಮೌದ್ಗೀಲ್ ಅವರಿಗೆ ಪ್ರಶಸ್ತಿಗಳು
ದಾವಣಗೆರೆ, ಫೆ.25- ಬಸವಚೇತನ ಶ್ರೀ ಜಯದೇವ ಜಗದ್ಗುರುಗಳ 64ನೇ ಸರಳ ಸ್ಮರಣೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 28 ರಂದು ಸಂಜೆ 6.30 ಕ್ಕೆ ನಗರದ ಶ್ರೀ ಶಿವಯೋಗಾಶ್ರಮದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದ ಸಾನ್ನಿಧ್ಯವನ್ನು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ವಹಿಸಲಿದ್ದು, ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ `ಜಯದೇವಶ್ರೀ’ ಪ್ರಶಸ್ತಿಯನ್ನು ಸಾಹಿತಿ ಡಾ. ಕೆ.ಮರುಳಸಿದ್ದಪ್ಪ ಅವರಿಗೆ, `ಶೂನ್ಯಪೀಠ ಚನ್ನಬಸವ ಪ್ರಶಸ್ತಿ’ಯನ್ನು ಸಾಹಿತಿ ಪ್ರೊ. ಹೆಚ್.ಲಿಂಗಪ್ಪ ಅವರಿಗೆ, `ಶೂನ್ಯ ಪೀಠ ಅಲ್ಲಮ ಪ್ರಶಸ್ತಿ’ಯನ್ನು ಸುದ್ದಿಮೂಲ ದಿನಪತ್ರಿಕೆಯ ಸಂಪಾದಕರಾದ ಬಸವರಾಜ ಸ್ವಾಮಿ ಅವರಿಗೆ ಮತ್ತು ಕರ್ನಾಟಕ ರಾಜ್ಯ ಕರಕುಶಲ ನಿಗಮದ ವ್ಯವಸ್ಥಾಪಕರಾದ ಶ್ರೀಮತಿ ರೂಪಾ ಡಿ.ಮೌದ್ಗೀಲ್ ಅವರಿಗೆ `ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಇವರುಗಳು ಆಗಮಿಸುವರು ಎಂದು ವಿವರಿಸಿದರು.
ವಚನ ಸಂಗೀತವನ್ನು ಜಮುರಾ ಕಲಾವಿದರು ಮತ್ತು ಬಸವ ಕಲಾಲೋಕದವರು ನಡೆಸಿಕೊಡುವರು. ಸಂಗೀತ ಕಾರ್ಯಕ್ರಮವನ್ನು ರಿಯಾಲಿಟಿ ಶೋ ಗಾಯಕ ಬಸವ ಪ್ರಸಾದ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಶ್ರೀಮತಿ ರುದ್ರಾಕ್ಷಿಬಾಯಿ ಅವರು ನಡೆಸಿಕೊಡುವರು ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಸ್ಮರಣೋತ್ಸವ ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಎಂ.ಜಯಕುಮಾರ್, ಅಂದನೂರು ಮುಪ್ಪಣ್ಣ, ಎಂ.ಕೆ.ಬಕ್ಕಪ್ಪ, ಓಂಕಾರಪ್ಪ ಮತ್ತಿತರರು ಉಪಸ್ಥಿತರಿದ್ದರು.