ರಫೇಲ್ ಯುದ್ಧ ವಿಮಾನ ಖರೀದಿ : ತನಿಖೆಗೆ ಆಗ್ರಹ

ದಾವಣಗೆರೆ, ಏ.7- ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ, ದೇಶದ ಉನ್ನತ ತನಿಖಾ ಸಂಸ್ಥೆಗಳು, ಸರ್ವೋಚ್ಛ ನ್ಯಾಯಾಲಯದ ನಿ. ನ್ಯಾಯಮೂರ್ತಿಗಳ ಇಲ್ಲವೇ ಹಾಲಿ ನ್ಯಾಯಮೂರ್ತಿ ಗಳಿಂದ ತನಿಖೆ ನಡೆಸಿ ನಿಜಾಂಶ ಬಯಲಿಗೆ ಎಳೆಯುವಂತೆ ರಾಷ್ಟ್ರೀಯ ಯುವ ಕಾಂಗ್ರೆಸ್‍ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್ ಒತ್ತಾಯಿಸಿದರು.

ಈ ಕುರಿತು  ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದು. ಈಗಾಗಲೇ ಫ್ರಾನ್ಸಿನ ಪ್ರತಿಷ್ಠಿತ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ  ತನಿಖೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಈಗಾಗಲೇ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಭಾರತದ ಮಧ್ಯವರ್ತಿಗೆ ಸರಿಸುಮಾರು 1.1 ಮಿಲಿಯನ್ ಯೂರೋ (8.62 ಕೋ. ರೂ.) ಹಣವನ್ನು ಕೊಡಲಾಗಿದೆ ಎಂದು ತಿಳಿಸಿದೆ. ಇದು ಫ್ರಾನ್ಸಿನ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ಬಗ್ಗೆ ರಾಷ್ಟ್ರಪತಿ ಕೂಡಲೇ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

2016ರಲ್ಲಿ ಭಾರತ ಸರ್ಕಾರ 36 ರಫೇಲ್ ಯುದ್ಧ ವಿಮಾನಗಳನ್ನು ಸುಮಾರು 60 ಸಾವಿರ ಕೋಟಿಗಳಿಗೆ ಖರೀದಿಸಲಾಗಿತ್ತು. ಈ ಒಪ್ಪಂದವು ಭಾರತ ಹಾಗೂ ಫ್ರಾನ್ಸ್ ನಡುವೆ ನಡೆದಿತ್ತು. ಈ ಒಪ್ಪಂದದಲ್ಲಿ ಮಧ್ಯವರ್ತಿ ಯಾರು ಎಂಬುದೇ ಪ್ರಶ್ನಾರ್ಥಕವಾಗಿದೆ. ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಧ್ಯವರ್ತಿ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಇದಲ್ಲದೇ ಡಸಾಲ್ಟ್ ಕಂಪನಿ ರಫೇಲ್‍ಗಳನ್ನು ಭಾರತಕ್ಕೆ ನೀಡಿರುತ್ತದೆ. ಈ ಕಂಪನಿ ಮುಂದಿನ ದಿನಗಳಲ್ಲಿ ಯಾವುದೇ ವ್ಯವಹಾರವನ್ನು ನಡೆಸದಂತೆ ಭಾರತ ಸರ್ಕಾರ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಬರುವ ಮುಂದಿನ ದಿನಗಳಲ್ಲಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ರಫೇಲ್ ಹಗರಣದ ವಿರುದ್ಧ ಹೋರಾಟ ಹಾಗೂ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮಹಮ್ಮದ್ ಸಾಧಿಕ್ ಸದ್ದಾಂ, ಮಹಮ್ಮದ್ ವಾಜೀದ್, ಮಹಮ್ಮದ್ ರಫೀಕ್, ಫಾರೂಕ್ ಷೇಖ್ ಇದ್ದರು.

error: Content is protected !!