ದಾವಣಗೆರೆ, ಫೆ.4- ನಕಲಿ ದಾಖಲೆ ಸೃಷ್ಟಿಸಿ ಮತದಾರ ಪಟ್ಟಿ ಯಲ್ಲಿ ಸಚಿವ ಆರ್. ಶಂಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರ ಹೆಸರು ಸೇರಿಸಲು ಮುಂದಾಗಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಶುದ್ಧ ಸುಳ್ಳು. ಅಲ್ಲದೇ ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡರು ತಾವುಗಳು ಗೆದ್ದು, ದಾವಣಗೆರೆ ನಿವಾಸಿಯಾಗುತ್ತೇನೆ ಎಂದು ಆಗಲೇ ಘೋಷಣೆ ಮಾಡಿದ್ದರು. ಆ ಪ್ರಕಾರ ಅವರು ಇಲ್ಲಿಯೇ ಮನೆ ಮಾಡಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳುವುದು ಅವರ ಸಂವಿಧಾನದ ಹಕ್ಕಾಗಿರುತ್ತದೆ. ಅದನ್ನು ಪ್ರಶ್ನೆ ಮಾಡುವ ಹಕ್ಕು ಕಾಂಗ್ರೆಸ್‌ನವರಿಗಿಲ್ಲ ಎಂದು ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಹೆಚ್. ದಿವಾಕರ್, ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ, ಕೆ.ಹೆಚ್. ಧನಂಜಯ್, ಎ.ಎಸ್. ಮಂಜುನಾಥ್ ತಿಳಿಸಿದ್ದಾರೆ.
ವಾಮಮಾರ್ಗದ ಸಂಸ್ಕೃತಿ ಕಾಂಗ್ರೆಸ್‌ನದ್ದೇ ಹೊರತು ಬಿಜೆಪಿಯವರದ್ದಲ್ಲ. ಏಕೆಂದರೆ ಈ ಹಿಂದೆ ಇಲ್ಲಿನ ನಿವಾಸಿಗಳಲ್ಲದ ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ರಘು ಆಚಾರ್, ಹೆಚ್.ಎಂ. ರೇವಣ್ಣ, ಮೋಹನ್ ಕೊಂಡಜ್ಜಿ ಅವರುಗಳ ಹೆಸರನ್ನು ಅಕ್ರಮ ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು ಕಾಂಗ್ರೆಸ್‌ನವರು ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಒಳಗೊಂಡ ಮತದಾರ ಪಟ್ಟಿಯ ಬಗ್ಗೆ, ಬೇರೆಯವರ ಕಡೆಯಿಂದ ಕೊಡಿಸಿದ ದೂರಿನ ವಿಚಾರಣೆ ನಡೆದು ಅದರ ಬಗ್ಗೆ ಈಗಾಗಲೇ ಮತದಾರ ನೋಂದಣಿ ಅಧಿಕಾರಿಗಳು ತೀರ್ಪನ್ನು ನೀಡಿರುತ್ತಾರೆ. ಹೀಗಿದ್ದರೂ ಸಹ ವಿನಾಕಾರಣ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದಿದ್ದಾರೆ.
ಅಲ್ಲದೇ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಅವರು ತಮ್ಮ ವಾರ್ಡಿನಲ್ಲಿ ವಾಸಿಸದೇ ಇರುವ ಸುಮಾರು 1000-1500 ಮತದಾರರು 16ನೇ ವಾರ್ಡ್‌ನಲ್ಲಿ ವಾಸಿಸದೇ ಇದ್ದರೂ ಮತದಾರರಾಗಿದ್ದು, ಅವರುಗಳ ಹೆಸರನ್ನು ತೆಗೆದು ಹಾಕದಂತೆ ನೋಡಿಕೊಂಡಿರುತ್ತಾರೆ. ಅದನ್ನು ಈಗಾಗಲೇ ಭಾರತ ಚುನಾವಣೆ ಆಯೋಗ, ರಾಜ್ಯ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದ್ದು, ಆ ಪ್ರಕಾರ ತನಿಖೆ ನಡೆಯುತ್ತಿದೆ ಎಂದು ದಿವಾಕರ್ ಮತ್ತಿತರರು ವಿವರಿಸಿದ್ದಾರೆ.