ದಾವಣಗೆರೆ, ಫೆ.1- ಮೂರು ದೇವತೆಗಳ ಸಂಗಮವಾಗಿರುವ ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯಲ್ಲಿನ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಶ್ರೀ ಬನಶಂಕರಿ ದೇವಿಯ 7ನೇ ವರ್ಷದ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.
ದೇವಾಂಗ ಜಗದ್ಗುರು ದಯಾನಂದಪುರಿ ಶ್ರೀಗಳ ಕೃಪಾಶೀರ್ವಾದ ದೊಂದಿಗೆ ಬನಶಂಕರಿ ದೇವಸ್ಥಾನ ಸಮಿತಿ ಮತ್ತು ಬನಶಂಕರಿ ಯುವಕರ ಸಂಘದ ವತಿಯಿಂದ ನಡೆದ ಮೂರು ದಿನಗಳ ದೇವಿಯ ಜಾತ್ರಾ ಮಹೋತ್ಸ ವದ ಪ್ರಯುಕ್ತ ಮೊದಲ ದಿನ ನಂದಿ ಧ್ವಜಾ ರೋಹಣ, ಮಹಾಮಂಗ ಳಾರತಿ, 2ನೇ ದಿನ ಗಂಗಾ ಪೂಜೆ, ಶಾಖಾಂ ಬರಿ ವ್ರತ, ವಿಶೇಷ ತರಕಾರಿ ಅಲಂಕಾರ ಮಾಡಲಾಯಿತು. ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಗಾಯತ್ರಿ ದೇವಿ ಮತ್ತು ಲಕ್ಷ್ಮಿ ದೇವಿಗೂ ಸಹ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಮೂರನೇ ದಿನದಂದು ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವಸ್ಥಾನದ ಆವರಣದಿಂದ ನಿಟ್ಟುವಳ್ಳಿಯ ರಾಜ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಬನಶಂಕರಿ ದೇವಿಯ ಬೃಹತ್ ಮೆರವಣಿಗೆ ನಡೆಯಿತು.