ಮಲೇಬೆನ್ನೂರು, ಜ.29- ಉಕ್ಕಡಗಾತ್ರಿ, ಹೊಳೆಸಿರಿಗೆರೆ, ಬನ್ನಿಕೋಡು ಮತ್ತು ರಾಜನಹಳ್ಳಿ ಗ್ರಾಪಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಉಕ್ಕಡಗಾತ್ರಿ ಗ್ರಾಪಂನಲ್ಲಿ ಒಟ್ಟು 12 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ನಂದಿಗುಡಿ ಗ್ರಾಮದ ಕರಿಬಸಪ್ಪ ಬಸಪ್ಪ ಅವರು ಒಬ್ಬರೇ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿದ್ದು, ಇವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಉಪಾಧ್ಯಕ್ಷ ಸ್ಥಾನ ಬಿಸಿಎಂ `ಎ’ ಮಹಿಳೆಗೆ ಇದ್ದು, ಇಬ್ಬರು ಮಹಿಳೆಯರು ಇದ್ದಾರೆ.
ಹೊಳೆಸಿರಿಗೆರೆ ಗ್ರಾಪಂ ನಲ್ಲಿ ಒಟ್ಟು 14 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದೆ. ಕಾವ್ಯ ಮಂಜುನಾಥ್ ಒಬ್ಬರೇ ಎಸ್ಟಿಗೆ ಸೇರಿರುವುದರಿಂದ ಅವರ ಆಯ್ಕೆ ಅವಿರೋಧವಾಗಲಿದೆ.
ಇಲ್ಲಿಯೂ ಉಪಾಧ್ಯಕ್ಷ ಸ್ಥಾನ ಬಿಸಿಎಂ `ಎ’ ಮಹಿಳೆಗೆ ಮೀಸಲಾಗಿದ್ದು, ಇಬ್ಬರು ಬಿಸಿಎಂ `ಎ’ ಮಹಿಳೆಯರಿದ್ದಾರೆ.
ಬನ್ನಿಕೋಡು ಗ್ರಾಪಂ ನಲ್ಲಿ 17 ಜನ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದೆ. ಎಸ್ಟಿ ಮೀಸಲು ಸ್ಥಾನದಿಂದ ಗ್ರಾಪಂ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ರೇಣುಕಮ್ಮ ಹನುಮಂತಪ್ಪ ಕೋಳಿ ಅವರು ಈಗ ಅಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇಲ್ಲಿ ಕೂಡಾ ಎಸ್ಟಿಗೆ ಸೇರಿದ ಮಹಿಳೆ ರೇಣುಕಮ್ಮ ಒಬ್ಬರೇ ಇದ್ದಾರೆ.
ರಾಜನಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನವೂ ಎಸ್ಟಿಗೆ ಮೀಸಲಾಗಿದ್ದು, ಚೈತ್ರ ಲಂಕೇಶ್ ಅವರು ಒಬ್ಬರೇ ಎಸ್ಟಿ ಸದಸ್ಯರಾಗಿರುವ ಕಾರಣ ಇವರ ಆಯ್ಕೆಯೂ ಅವಿರೋಧವಾಗಿ ಆಗಲಿದೆ.
ಹರಿಹರ ತಾಲ್ಲೂಕಿನಲ್ಲಿ ಒಟ್ಟು 24 ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಮೀಸಲಾತಿ ಘೋಷಣೆ ಆದ ನಂತರ ಈ 4 ಗ್ರಾಪಂ ಹೊರತುಪಡಿಸಿ ಉಳಿದ ಗ್ರಾಪಂ ಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡುಬಂದಿದೆ.
ಕೆಲವು ಪಂಚಾಯ್ತಿಗಳಲ್ಲಿ ಈಗಾಗಲೇ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.