ದಾವಣಗೆರೆ, ಜ. 30- ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಪಂಚಮಸಾಲಿ ಸಮಾಜದ 12 ಜನ ಶಾಸಕರಿದ್ದಾರೆ. ಅವರು ಮನಸ್ಸು ಮಾಡಿದರೆ ಸರ್ಕಾರವನ್ನೇ ಅಲ್ಲಾಡಿಸಬಲ್ಲರು ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯನಂದ ಕಾಶಪ್ಪನವರ್ ಹೇಳಿದ್ದಾರೆ.
ತಾಲ್ಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಶುಕ್ರವಾರ ನಡೆದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಮುಂದಾಗುವ ಘಟನೆಗಳಿಗೆ ಆಸ್ಪದ ನೀಡದೆ ಕೂಡಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ನಿರ್ಧಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮೀಸಲಾತಿ ನಿರ್ಧಾರ ಪ್ರಕಟಿಸದಿದ್ದರೆ, ನಾಳೆಯಿಂದ ಉಗ್ರ ಹಾಗೂ ಕ್ರಾಂತಿ ರೂಪದ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ ಅವರು, ಪಂಚಮಸಾಲಿಗಳು ಸುಮ್ಮನೆ ಕುಳಿತರೆ ಮೀಸಲಾತಿ ಸಿಗುವುದಿಲ್ಲ. ನಾವೆಲ್ಲರೂ ಸಜ್ಜಾಗಿ ಹೋರಾಡುವ ಮೂಲಕ ಮೀಸಲಾತಿ ಪಡೆಯೋಣ ಎಂದು ಸಮಾಜಕ್ಕೆ ಕರೆ ನೀಡಿದರು.