ಪ್ರತಿಮಾ ಸಭಾದಿಂದ ನಾಳೆ `ಸಂವಾದ, ಹಾಸ್ಯ ನಾಟಕ ಪ್ರದರ್ಶನ’

ದಾವಣಗೆರೆ, ಮಾ.27- ನಗರದ ಪ್ರತಿಮಾ ಸಭಾದ ವತಿಯಿಂದ ಹೊಸ  ಸಂವತ್ಸರ `ವಿಶ್ವಾವಸು’ ಹಾಗೂ ಹೊಸ ವರ್ಷ ಉಗಾದಿಗೆ ಸ್ವಾಗತ ಕೋರುವ ಹಿನ್ನೆಲೆಯಲ್ಲಿ `ಸಂವಾದ ಮತ್ತು ಹಾಸ್ಯ ನಾಟಕ ಪ್ರದರ್ಶನ’ ಏರ್ಪಡಿಸಲಾಗಿದೆ.

ನಾಡಿದ್ದು ದಿನಾಂಕ 29 ರ ಶನಿವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.55ರವರೆಗೆ ಬಾಪೂಜಿ ಸಭಾಂಗಣದಲ್ಲಿ ಸಂವಾದ ನಡೆಯಲಿದ್ದು, ಸಂಜೆ 5.30 ರಿಂದ 7.15ರವರೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರತಿಮಾ ಸಭಾದ ಅಧ್ಯಕ್ಷ ಬಾ.ಮ. ಬಸವ ರಾಜಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂವಾದವನ್ನು ಪೂರ್ವವಲಯ ಐಜಿಪಿ ಡಾ. ರವಿಕಾಂತೇಗೌಡ ಉದ್ಘಾಟಿಸಲಿದ್ದು, ಪ್ರತಿಮಾ ಸಭಾದ ಗೌರವ ಅಧ್ಯಕ್ಷ ಪ್ರೊ.ಎನ್. ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಉಪಸ್ಥಿತರಿರಲಿದ್ದಾರೆ. 

`ಪ್ರಸ್ತುತ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು’ ಕುರಿತ ಸಂವಾದದಲ್ಲಿ ಖ್ಯಾತ ಕಿರುತೆರೆ ಹಾಗೂ  ಬೆಳ್ಳಿತೆರೆ ನಿರ್ದೇಶಕ ಟಿ.ಎನ್. ಸೀತಾರಾಮನ್, `ನಮ್ಮ ಜಾನಪದ: ಇಂದಿನ ಸ್ಥಿತಿಗತಿ’ ಕುರಿತ ಸಂವಾದದಲ್ಲಿ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಹಾಗೂ `ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿ ಒಲವು-ನಿಲುವು’ ಕುರಿತ ಸಂವಾದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಭಾಗವಹಿಸಲಿದ್ದಾರೆ. ಪ್ರತಿ ಸಂವಾದದ ನಡುವೆ ಧಾರಾವಾಹಿ ಗೀತೆ, ಜಾನಪದ ಗೀತೆ, ರಂಗಗೀತೆಗಳ ಗಾಯನ ಇರಲಿದೆ.

ಖ್ಯಾತ ಕಿರುತೆರೆ ನಟಿ ಡಾ. ಎಸ್.ವಿ. ಸುಷ್ಮಾ ನಿರ್ದೇಶಿಸಿರುವ `ಎಲ್.ಎಸ್.ಡಿ.’  ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನಾಟಕ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಪ್ರತಿಮಾ ಸಭಾದ ಈ ವರ್ಷದ ಎರಡನೇ ಕಾರ್ಯಕ್ರಮ ಇದಾಗಿದೆ ಎಂದು ಪ್ರತಿಮಾ ಸಭಾದ ಉಪಾಧ್ಯಕ್ಷ ಬಿ.ಎನ್. ಮಲ್ಲೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್. ಸಿದ್ಧರಾಜು, ಶೈಲಜಾ, ಮುರುಗೇಶ್ ಬಾಬು ಉಪಸ್ಥಿತರಿದ್ದರು.

error: Content is protected !!