ನಗರದಲ್ಲಿ ಇಂದು ವಿಶ್ವ ಕ್ಷಯರೋಗ ದಿನಾಚರಣೆ

ಜಿಲ್ಲೆಯಲ್ಲಿ 40 ಗ್ರಾಮ ಪಂಚಾಯ್ತಿಗಳು ಕ್ಷಯ ಮುಕ್ತ, ಗ್ರಾ.ಪಂ ಸದಸ್ಯರು, ಪಿಡಿಒಗಳಿಗೆ ಸನ್ಮಾನ

ದಾವಣಗೆರೆ, ಮಾ.23- ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ  ನಾಳೆ ದಿನಾಂಕ 24ರ ಸೋಮವಾರ ಬೆಳಿಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಆಚರಿಸಲಾಗುತ್ತಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಮುರುಳಿಧರ ಪಿ.ಡಿ. ಅವರು,  ಕಾರ್ಯಕ್ರಮ ದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಸಿಇಒ ಸುರೇಶ್ ಇಟ್ನಾಳ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2188 ಕ್ಷಯರೋಗಿಗಳಿದ್ದಾರೆ. 1841 ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿ ಸಲಾಗಿದೆ. ಮರಣ ಪ್ರಮಾಣ ಶೇ.9ರಷ್ಟಿದೆ. ಕಳೆದ ವರ್ಷ ಶೇ.10ರಷ್ಟಿತ್ತು ಎಂದು ತಿಳಿಸಿದರು.

ಭಾರತ ದೇಶದಲ್ಲಿ ಕ್ಷಯರೋಗವು ವಯಸ್ಕರಲ್ಲಿ ಮರಣ ಉಂಟು ಮಾಡುವ ಗಂಭೀರ ಖಾಯಿಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ಐದು ನಿಮಿಷಕ್ಕೆ ಇಬ್ಬರು ಕ್ಷಯರೋಗದಿಂದ ಮರಣ ಹೊಂದುತ್ತಿದ್ದಾರೆ. ಚಿಕಿತ್ಸೆ ಪಡೆಯದ ಓರ್ವ ವ್ಯಕ್ತಿ ವರ್ಷದಲ್ಲಿ 10 ರಿಂದ 15 ಜನರಿಗೆ ರೋಗ ಹರಡಬಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದರು.

2025ನೇ ಇಸವಿಗೆ ಭಾರತವನ್ನು ಕ್ಷಯಮುಕ್ತ ಮಾಡಲು ಆರೋಗ್ಯ ಇಲಾಖೆ ಸಂಕಲ್ಪ ಮಾಡಿದ್ದದು, ಜಿಲ್ಲೆಯಲ್ಲೂ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ.

ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ರೋಗಿಗಳ ಖಾತೆಗೆ ಪ್ರತಿ ತಿಂಗಳು 1 ಸಾವಿರ ರೂ.ಗಳನ್ನು ಜಮೆ ಮಾಡಲಾಗುತ್ತಿದೆ ಎಂದರು. ಟಿಬಿ ಮುಕ್ತ ಜಿಲ್ಲೆ ಮಾಡುವ ಹಿನ್ನೆಲೆಯಲ್ಲಿ 40 ಗ್ರಾಮ ಪಂಚಾಯ್ತಿಗಳನ್ನು ಗುರುತಿಸಲಾಗಿದೆ.  ಡಿಹೆಚ್‌ಒ ಡಾ.ಷಣ್ಮುಖಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!