ದಾವಣಗೆರೆ, ಮಾ.23- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಕನ್ನಡಿಗರ ಟ್ರಸ್ಟ್ ವತಿಯಿಂದ ನಗರದಲ್ಲಿ ಬರುವ ಮೇ 7ರಿಂದ 12 ರವರೆಗೆ 6 ದಿನಗಳ ಕಾಲ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.
ಆರು ದಿನಗಳ ಕಾಲ ವಿಭಿನ್ನ ಸಮ್ಮೇಳನಗಳು ನಡೆಯಲಿದ್ದು, ಮೇ 7ರಂದು ಸಾಹಿತ್ಯ ಸಮ್ಮೇಳನ, 8ರಂದು ಯೂಟ್ಯೂಬರ್ಸ್ ಸಮ್ಮೇಳನ, 9ರಂದು ಶಿಕ್ಷಣ ಸಮ್ಮೇಳನ, 10ರಂದು ಸಿನಿ ಸಾಹಿತ್ಯ, ಕಲಾವಿದರ ಸಮ್ಮೇಳನ, 11ರಂದು ಕೃಷಿ ಸಮ್ಮೇಳನ ಹಾಗೂ 12ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಆರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ಬಸವಣ್ಣ, ಸರ್ವಜ್ಞ ಹಾಗೂ ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ. ರಾಜ್ಯದ ಹಿರಿಯ ಹಾಗೂ ನವ ಸಾಹಿತಿಗಳನ್ನು ಗುರುತಿಸುವ ವಿಶಿಷ್ಟ ಕಾರ್ಯಕ್ರಮ ಸಮ್ಮೇಳನವಾಗಿದೆ.
ಹೊಸ ಸಾಹಿತಿಗಳಿಗೂ ವೇದಿಕೆ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಮೇ 7ರಂದು ನವ ಲೇಖಕರ ಮೇಳ, ಪ್ರಕಾಶಕರ ಮೇಳ, ಸಾಮಾಜಿಕ ಬರಹಗಾರರ ಮೇಳ ಹಾಗೂ ಅಂತರರಾಷ್ಟ್ರೀಯ ವಸ್ತು ಪ್ರದರ್ಶನವೂ ನಡೆಯಲಿದೆ.
ನೋಂದಣಿ ಮಾಡಿಕೊಳ್ಳಲು ಶೀಘ್ರದಲ್ಲೇ ವೆಬ್ ಸೈಟ್ ಬಿಡುಗಡೆಗೊಳಿಸಲಾಗುವುದು.