ಅತ್ಯಾಚಾರ ಪ್ರಕರಣ : ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ, 35 ಸಾವಿರ ರೂ ದಂಡ

ದಾವಣಗೆರೆ, ಮಾ.20- ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಬಲಾತ್ಕಾರ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಂತ ಶಿಕ್ಷೆಗೆ ಒಳಗಾದ ಅಪರಾಧಿ. 2023ರ ಫೆ.11ರಂದು ಶಾಲೆಗೆ ಹೋಗಿ ಬರುತ್ತೇನೆಂದು ಹೋದ 13 ವರ್ಷದ ಬಾಲಕಿ ಮನೆಗೆ ಬರದಿರುವ ಬಗ್ಗೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪಾಲಕರು ದೂರು ದಾಖಲಿಸಿದ್ದರು.

ಕಾಣೆಯಾದ ದಿನವೇ ಆರೋಪಿ ಅಪ್ರಾಪ್ತೆಯನ್ನು ಮದುವೆ ಆಗುವುದಾಗಿ ನಂಬಿಸಿ. ಬೆಂಗಳೂರಿಗೆ ಕರೆದೊಯ್ದು ಬೆಂಗಳೂರಿನ ಬಿಇಎಲ್ ಲೇಔಟ್‌ನ, ಭರತ್‌ನಗರ 8ನೇ ಕ್ರಾಸಿನಲ್ಲಿರುವ ನಿರ್ಮಾಣ ಹಂತದ ಕಟ್ಟಡ ಬಳಿಯಿರುವ ತಾತ್ಕಾಲಿಕ ಶೆಡ್‌ನಲ್ಲಿ ಅಪ್ರಾಪ್ತೆ ಎಂದು ಗೊತ್ತಿದ್ದರೂ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಮಲ್ಲಮ್ಮ ಚೌಬೆ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆಪಾದಿತನ ಮೇಲಿನ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಫಿರ್ಯಾದಿ ಪರ ಸರ್ಕಾರಿ ವಕೀಲೆ ಸುನಂದಾ ಮಡಿವಾಳರ್‌ ನ್ಯಾಯ ಮಂಡಿಸಿದ್ದಾರೆ. ಸಂತ್ರಸ್ಥೆಗೆ ಸರ್ಕಾರದಿಂದ 5 ಲಕ್ಷ  ಪರಿಹಾರ ನೀಡುವಂತೆ ನ್ಯಾಯಾಲಯ ತಿಳಿಸಿದೆ.

error: Content is protected !!