ದಾವಣಗೆರೆ, ಫೆ.6- ನಗರದಲ್ಲಿ ಈ ವರ್ಷವೇ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು, ಅದಕ್ಕಾಗಿ ಮುಖ್ಯಮಂತ್ರಿಗಳು ಈ ಬಾರಿಯ ಆಯವ್ಯಯದಲ್ಲಿ ಕನಿಷ್ಠ 50 ಕೋಟಿ ರೂ.ಗಳನ್ನು ತೆಗೆದಿರಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2017ರಲ್ಲಿಯೇ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಘೋಷಿಸಿ, 30 ಕೋಟಿ ರೂ. ಹಣವನ್ನು ಆಯವ್ಯಯದಲ್ಲಿ ತೆಗೆದಿರಿಸಿದ್ದರು, ಅಲ್ಲದೇ 5 ಕೋಟಿ ರೂ. ಹಣ ಬಿಡುಗಡೆ ಕೂಡಾ ಮಾಡಿದ್ದರು. ಆದರೆ ಕಾರಣಾಂತರದಿಂದ ಅದು ಮುಂದೂಡಲ್ಪಟ್ಟಿತ್ತು.
ಈ ಸಂಬಂಧ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘ ಸಂಸ್ಥೆಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮತ್ತೆ ಮನವಿ ಸಲ್ಲಿಸಲಾಗಿದೆ.
ಹಾವೇರಿ ಮತ್ತು ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಲ್ಲಿಯೂ ಸಹ ಈ ವರ್ಷವೇ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಾಮದೇವಪ್ಪ ತಿಳಿಸಿದ್ದಾರೆ.