ದಾವಣಗೆರೆ, ಮಾ.5- ಗ್ರಾಹಕರಿಂದ ಹೆಚ್ಚುವರಿ ಕಂತುಗಳನ್ನು ವಸೂಲಿ ಮಾಡಿದ ಫೈನಾನ್ಸ್ಗೆ, ಪಾವತಿಸಿಕೊಂಡ 57,740 ಹಣ ಹಿಂದಿರುಗಿಸುವುದು, ಮಾನಸಿಕ ತೊಂದರೆ ಕೊಟ್ಟಿದ್ದಕ್ಕೆ 25 ಸಾವಿರ ಪರಿಹಾರ ಹಾಗೂ ದೂರಿನ ವೆಚ್ಚ 5 ಸಾವಿರ ರೂ. ಭರಿಸುವ ಜತೆಗೆ ರಿಕನ್ವೆಯನ್ಸ್ ಡೀಡ್ ಮಾಡಿ ಯಾವುದೇ ಸಾಲ ಬಾಕಿ ಇರುವುದಿಲ್ಲ ಎಂಬ ಪ್ರಮಾಣ ಪತ್ರ ನೀಡುವುದು ಹಾಗೂ ಸಾಲದ ಭದ್ರತೆಗೆ ಪಡೆದುಕೊಂಡಿದ್ದ ಚೆಕ್ಕು ಹಿಂತಿರುಗಿಸುವಂತೆ ಜಿಲ್ಲಾ ಗ್ರಾಹಕ ಆಯೋಗವು ಮಹತ್ವದ ಆದೇಶ ನೀಡಿದೆ.
ನಾಗನೂರಿನ ರೇಖಾ ಚಂದ್ರಶೇಖರಪ್ಪ ಎಂಬುವ ವರು 2019ರಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕಿ ನಲ್ಲಿ ತಮ್ಮ ಮನೆಯನ್ನು 4.04 ಲಕ್ಷ ರೂ.ಗೆ ಅಡಮಾನ ಮಾಡಿ ಸಾಲ ಪಡೆದಿದ್ದರು. ಮಾಸಿಕ 11390 ರೂ.ಗಳಂತೆ 60 ಸಮ ಕಂತುಗಳಲ್ಲಿ ಸಾಲ ಮರುಪಾವತಿ ಸುವಂತೆ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು.
ಸಾಲದ ಕಂತುಗಳನ್ನು ನಿರಂತರವಾಗಿ ಪಾವತಿಸುತ್ತಾ ಬಂದಿದ್ದ ಗ್ರಾಹಕರು, ಕೋವಿಡ್ ಸಂಕಷ್ಟದ ಆರ್ಥಿಕ ತೊಂದರೆಯಿಂದಾಗಿ 4 ಕಂತುಗಳನ್ನು ಪಾವತಿಸಿರಲಿಲ್ಲ. ಆ ಸಂದರ್ಭದಲ್ಲಿ ಆರ್.ಬಿ.ಐ ಸಹ ಸಾಲದ ಕಂತು ತುಂಬಲು ಒತ್ತಾಯಿಸಬಾರದು. ತದ ನಂತರ ಬಾಕಿ ಕಂತುಗಳನ್ನು ಕಟ್ಟಿಸಿಕೊಳ್ಳಬಹುದು ಎಂದು ಗೈಡ್ಲೈನ್ ನೀಡಿತ್ತು.
ಇದರಂತೆ ಗ್ರಾಹಕರು ಬಾಕಿ ಉಳಿದ ಕಂತುಗಳನ್ನು ಸೇರಿ ಎಲ್ಲಾ 60 ಕಂತುಗಳನ್ನು ಕಟ್ಟಿ ಪೂರ್ಣ ಗೊಳಿಸಿದ್ದರೂ ಹೆಚ್ಚುವರಿಯಾಗಿ 6 ಕಂತು ವಸೂಲಿ ಮಾಡಿದ್ದರು. ಆದರೂ ಸಹ ಬಾಕಿ ಕಂತುಗಳಿವೆ ಎಂದು ಗ್ರಾಹಕರಿಗೆ ಬ್ಯಾಂಕ್ ನೋಟಿಸ್ ನೀಡಿ, ಸಿಬ್ಬಂದಿಗಳು ಸಾಲದ ಕಂತು ತುಂಬುವಂತೆ ಒತ್ತಾಯಿಸುತ್ತಿದ್ದರು.
ಈ ಕುರಿತು ಗ್ರಾಹಕರು ವಕೀಲರ ಮೂಲಕ ಪೈನಾನ್ಸ್ ವಿರುದ್ಧ ದಾವಣಗೆರೆಯ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸಾಕ್ಷಿ ಹಾಗೂ ದಾಖಲೆ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಸಿ.ಎಸ್. ತ್ಯಾಗರಾಜನ್ ಮತ್ತು ಸದಸ್ಯೆ ಬಿ.ಯು. ಗೀತಾ ಆದೇಶ ಹೊರಡಿಸಿದ್ದಾರೆ. ದೂರುದಾರರ ಪರ ಬಿ. ಬಸವರಾಜ್ ಉಚ್ಚಂಗಿದುರ್ಗ ವಾದ ಮಂಡಿಸಿದ್ದರು.