ದಾವಣಗೆರೆ, ಫೆ. 26- ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಮತ್ತು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ವತಿಯಿಂದ ನಾಳೆ ದಿನಾಂಕ 27 ರ ಗುರುವಾರ ಬೆಳಿಗ್ಗೆ 11.30 ಕ್ಕೆ ನಗರದ ರೋಟರಿ ಬಾಲಭವನದಲ್ಲಿ ಸಚಿವ ಸಂತೋಷ್ ಲಾಡ್ ಅವರ ಜನ್ಮ ದಿನವನ್ನು ಆಪತ್ ರಕ್ಷಕ ದಿನವನ್ನಾಗಿ ಆಚರಿಸಲಾಗುವುದು ಎಂದು ಟ್ರಸ್ಟ್ ರಾಜ್ಯಾಧ್ಯಕ್ಷ ಡಿ. ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ಸಂತೋಷ್ ಲಾಡ್ ಅವರು ಒರಿಸ್ಸಾದ ರೈಲು ದುರಂತ, ಕೇರಳದ ಗುಡ್ಡ ಕುಸಿತ, ಕೇದಾರನಾಥದಲ್ಲಿ ಪ್ರವಾಹ ಸೇರಿದಂತೆ ಅನೇಕ ಅಪಘಾತ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರ ನೆರವಿಗೆ ನಿಂತು ಸಾವಿರಾರು ಜನರನ್ನು ರಕ್ಷಣೆ ಮಾಡಿರುವುದನ್ನು ಗಮನಿಸಿ ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸುವ ಸಲುವಾಗಿ ಅವರ ಹುಟ್ಟುಹಬ್ಬವನ್ನು `ಆಪತ್ ರಕ್ಷಕ ದಿನ’ ವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿ.ನಿಂಗಪ್ಪ, ಧನಂಜಯ, ವಿಜಯ್ ಉಪಸ್ಥಿತರಿದ್ದರು.