ಹರಿಹರದ ಚಿಂತ ಪ್ರತಿಷ್ಠಾನದ `ಸಂಸ್ಕೃತಿ – ಸಾಹಿತ್ಯ’ ಸಂವಾದದಲ್ಲಿ ಸಾಹಿತಿ ಜಿ.ಕೆ.ಕುಲಕರ್ಣಿ
ಹರಿಹರ, ಫೆ. 26- ಸಂಸ್ಕಾರ ಮತ್ತು ಸಂಸ್ಕೃತಿ ಎಂಬುದು ತುಂಬಾ ವಿಸ್ತಾರವಾಗಿದೆ, ಸಂಸ್ಕೃತಿಯಲ್ಲಿ ಸಾಹಿತ್ಯ, ನಾಟ್ಯ, ನಡವಳಿಕೆ ಎಲ್ಲವೂ ಒಳಗೊಂಡಿದೆ. ಇದನ್ನರಿತವ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಆರೋಗ್ಯ ಇಲಾಖೆಯ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಸಾಹಿತಿ ಜಿ.ಕೆ.ಕುಲಕರ್ಣಿ ತಿಳಿಸಿದರು.
ನಗರದ ಚಿಂತನ ಪ್ರತಿಷ್ಠಾನ ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟ ಚಿಂತನ ಪ್ರತಿಷ್ಠಾನದ ಕಚೇರಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಮಾಜ ಪ್ರಗತಿ ಸಾಧಿಸಲು ಸಂಸ್ಕಾರ ಮುಖ್ಯ ಕಾರಣ, ನಂತರ ಸಂಸ್ಕೃತಿ, ಸಾಹಿತ್ಯ ಬರುತ್ತದೆ. ಗುಜರಾತ್ ರಾಜ್ಯದಲ್ಲಿ ದೊರಕುವ ಕಲ್ಲುಗಳನ್ನು ತೆಗೆದು ಅದಕ್ಕೆ ಸಂಸ್ಕಾರ ನೀಡಿ ಅವುಗಳನ್ನು ವಜ್ರಗಳನ್ನಾಗಿ ಮಾರ್ಪಡಿಸುತ್ತಾರೆ. ಅದಕ್ಕೆ ತುಂಬಾ ಬೆಲೆ ಸಿಗುತ್ತದೆ ಎಂದರು.
ಒಂದು ಕಲ್ಲಿಗೆ ಸಂಸ್ಕಾರ ಸಿಕ್ಕರೆ ಅದು ಸಂಸ್ಕೃತಿಯ ಭಾಗವಾಗಿ ಮಾರ್ಪಾಡಾಯಿತು. ಬಿದಿರಿಗೆ ಸಂಸ್ಕಾರ ನೀಡಿದರೆ ಅದು ಕೊಳಲಾಗಿ ಬದಲಾವಣೆಯಾಗುತ್ತದೆ ಎಂದು ಉದಾಹರಿಸಿ ದರು. ಸಂಸ್ಕೃತಿ ಆಂತರಿಕವಾದುದು. ಅದು ಕಣ್ಣಿಗೆ ಗೋಚರಿಸುವುದಿಲ್ಲ. ಸಂಸ್ಕಾರ ಮನುಷ್ಯನ ನಡವಳಿಕೆಯನ್ನು ಬಿಂಬಿಸುತ್ತದೆ ಎಂದರು.
ಸಂಸ್ಕಾರದಿಂದ ಸಂಸ್ಕೃತಿ, ಸಂಸ್ಕೃತಿಯಿಂದ ಸಾಹಿತ್ಯ ಬೆಳೆದಿದೆ. ಸಾಹಿತ್ಯ ಜನಜೀವನದ ಅಂದಿನ ಕಾಲಘಟ್ಟವನ್ನು ಜನರಿಗೆ ತಿಳಿಸುತ್ತದೆ. ಪಂಪ, ರನ್ನ, ಕುಮಾರವ್ಯಾಸನ ಕಾರ್ಯಗಳನ್ನು ವಿವರಿಸಿದರು.
ಹಾಸನದ ಶಾಸನವೊಂದರಲ್ಲಿ ಕರ್ನಾಟಕದ ಜನ, ಜೀವನ ಹೇಗಿತ್ತೆಂದು ತಿಳಿದು ಬರುತ್ತದೆ. ಅಂದಿನ ಜನ ಕಲ್ಲಿನಲ್ಲಿ ಕೆತ್ತಿ ಜನಜೀವನವನ್ನು ವಿವರಿಸುತ್ತಿದ್ದರು. ಅವೇ ಶಾಸನಗಳು. ಅವರು ರಚಿಸಿದ ಕಾವ್ಯಗಳಿಂದ ಅಂದಿನ ಜೀವನ ಶೈಲಿ ಮತ್ತು ನಾಡಿನ ಬಗ್ಗೆ ತಿಳಿಯುತ್ತದೆ. ಇದರಿಂದ ನಮ್ಮ ಜೀವನದ ಮೇಲೆ ಸಾಹಿತ್ಯದ ಪ್ರಭಾವ ಗೊತ್ತಾಗುತ್ತದೆ ಎಂದರು. ಸೃಜನಶೀಲ ಸಾಹಿತ್ಯ ಕತೆ, ಕಾದಂಬರಿ, ಲೇಖನ, ನೀಳ್ಗತೆ, ಕವಿತೆ ಒಳಗೊಂಡಿರುತ್ತದೆ ಎಂದರು.
ಬಸವಣ್ಣನವರ ವಚನಗಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಸಾಹಿತ್ಯವಿತ್ತು. ಡಿವಿಜಿ ಮತ್ತು ಕುವೆಂಪು, ಬೆಂದ್ರೆಯವರ ಸಾಹಿತ್ಯದಲ್ಲಿನ ಕೆಲವು ವಿಷಯಗಳನ್ನು ಹಂಚಿಕೊಂಡರು. ಮನುಷ್ಯನಲ್ಲಿ ಸಹಜ ಗುಣ ಇರಬೇಕು. ಸಮಾಜದಲ್ಲಿ ನೊಂದವರಿಗೆ, ದುರ್ಬಲರಿಗೆ ಸಹಾಯ ಮಾಡುವುದು ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು. ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಒಳ್ಳೆಯ ಮಾನವನಾಗಲು ಸಾಧ್ಯ ಎಂದರು.
ಸಂಸ್ಕಾರ ಮತ್ತು ಸಂಸ್ಕೃತಿ ಮತ್ತು ಸಾಹಿತ್ಯದಿಂದ ಅರಿತ ಮಾನವ ಎತ್ತರಕ್ಕೆ ಏರಬಲ್ಲ ಹಾಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬಲ್ಲ. ಎಲ್ಲರೂ ಹೃದಯವಂತರಾಗಿ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಿ, ಎಲ್ಲರನ್ನೂ ಪ್ರೀತಿಸಿ ಆರೋಗ್ಯವಂತ, ಸದೃಢ ಸಮಾಜ ಕಟ್ಟಲು ಸಹಕರಿಸಿ ಎಂದು ಕೋರಿದರು.
ಸಾಹಿತಿ ಹೆಚ್.ಕೆ.ಕೊಟ್ರಪ್ಪ ಮಾತನಾಡಿದರು. ಸೌಮ್ಯ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ನಾಡಿಗೇರ್ ಸ್ವಾಗತಿಸಿದರು. ನಾಗರತ್ನ ವಂದಿಸಿದರು. ಶ್ಯಾಮಲಾ, ಮಂಜಮ್ಮ, ರಾಧಾ ಹನುಮಂತಪ್ಪ, ಚಂದನಾ ಕವಿತೆಗಳನ್ನು ವಾಚಿಸಿದರು.