ಚಿತ್ರದುರ್ಗ ಸಮೀಪದ ಶಿಬಾರದಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವ ಹಾಗೂ ಭಾರೀ ದನಗಳ ಜಾತ್ರೆಯನ್ನು ಇಂದಿನಿಂದ ಬರುವ ಮಾರ್ಚ್ 14ರವರೆಗೆ ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಹಾಗು ತಮಿಳುನಾಡು, ಆಂಧ್ರಪ್ರದೇಶದಿಂದ ಹಳ್ಳಿಕಾರ್, ಅಮೃತಮಹಲ್, ಸಣ್ಣಮಲ್ಲಿಗೆ, ಗುಜುಮಾವು, ನಾಟಿ ಸೇರಿದಂತೆ ವಿವಿಧ ತಳಿಯ ರಾಸುಗಳು ಸೇರಲಿವೆ. ಈ ಜಾತ್ರೆಗೆ ಸರ್ಕಾರದಿಂದ ಅನುಮತಿಯಿದ್ದು, ಸುತ್ತಮುತ್ತಲ ಜಿಲ್ಲೆಗಳ ರೈತರು ತಮ್ಮ ರಾಸುಗಳೊಂದಿಗೆ ಪಾಲ್ಗೊಂಡು, ಸದುಪಯೋಗ ಪಡೆಯಬೇಕೆಂದು ಶ್ರೀಮಠದ ತಿಳಿಸಲಾಗಿದೆ.
ಜಾತ್ರೆಯ ಸ್ಥಳದಲ್ಲಿ ನೀರು, ಬೆಳಕು ಮತ್ತು ಪಶುವೈದ್ಯಕೀಯ ಸೌಲಭ್ಯವಿರುತ್ತದೆ. ಜಾತ್ರೆ ಯಲ್ಲಿ ಹೋಟೆಲ್ಗಳು, ತಿಂಡಿ ತಿನಿಸುಗಳ ಅಂಗಡಿಗಳು, ಹೂ ಮಾರುವವರು ಇತ್ಯಾದಿಯವರಿಗೆ ಜಾಗ ನಿಗದಿಪಡಿಸಲಾಗಿದೆ. ಇಚ್ಚೆಯುಳ್ಳವರು ಜಾತ್ರಾ ಸಮಿತಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಜಾತ್ರೆ ನಡೆಯುವ ಸ್ಥಳದಲ್ಲಿ ಮದ್ಯ, ಮಾಂಸ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ.
ವಿವರಕ್ಕೆ ಶ್ರೀ ಮುರುಘಾ ಮಠ (98803 12595, 9880577376, 9980724365, 8310467509) ವನ್ನು ಸಂಪರ್ಕಿಸಬಹುದು.