ದಾವಣಗೆರೆ, ಜ. 21- ಮನೆಗೆ ಮನೆಗೆ ಔಷಧಿ ತಲುಪಿಸುವ ವ್ಯವಸ್ಥೆ ರದ್ದು ಮಾಡಬೇಕೆಂದು ದಾವಣಗೆರೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ಆಗ್ರಹಿಸಿದೆ.
ಕೋವಿಡ್-19 ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾರಕ ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡುವ ಉದ್ದೇಶದಿಂದ ಕೆಲವು ನಿಬಂಧನೆಗೆ ಒಳಪಟ್ಟು ಆನ್‍ಲೈನ್ ಮೂಲಕ ಮನೆ ಮನೆಗೆ ಔಷಧಿ ಸರಬರಾಜು ಮಾಡಲು ಅವಕಾಶ ನೀಡಿತ್ತು.
ಆದರೆ ಕೆಲವು ಸಂಸ್ಥೆಗಳು ದುರುಪಯೋಗ ಪಡಿಸಿಕೊಂಡು ಆನ್‍ಲೈನ್ ಹೆಸರಿನಲ್ಲಿ ಸಂಸ್ಥೆ ರಚಿಸಿಕೊಂಡು ಯಾವುದೇ ಔಷಧಿ ಬೇಕಾದರೂ ಯಾವ ನಿಬಂಧನೆ, ಅಡೆತಡೆ ಇಲ್ಲದೆ ಮನೆ ಮನೆಗೆ ತಲುಪಿಸಿ ಯುವ ಪೀಳಿಗೆಗೆ ವ್ಯಸನದ ಅಭ್ಯಾಸ ಮಾಡಿಸಿದ್ದು, ಮತ್ತು ಬರುವ ಔಷಧಿ ಮುಕ್ತವಾಗಿ ಸಿಗುವಂತಾಗಿದೆ.
ಈ ಬಗ್ಗೆ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ಮತ್ತು ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘವು ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಸಚಿವರಿಗೆ ಮನವಿ ಸಲ್ಲಿಸಿ ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಮನೆ ಮನೆಗೆ ಔಷಧಿ ತಲುಪಿಸುವ ವ್ಯವಸ್ಥೆ ರದ್ದುಗೊಳಿಸಬೇಕೆಂದು ಸಂಘದ ಅಧ್ಯಕ್ಷ ಪೋಪಟ್ ಲಾಲ್ ಎಂ.ಜೈನ್, ಗೌರವ ಕಾರ್ಯದರ್ಶಿ ಎನ್.ಪಿ.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.