ಮಾ. 1ರಂದು ಎಐಡಿಎಸ್‌ಓ ಪ್ರತಿಭಟನಾ ರಾಜ್ಯ ಸಮಾವೇಶ

ದಾವಣಗೆರೆ, ಫೆ. 24- ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ, ಪದವಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲು ಆಗ್ರಹಿಸಿ ಮತ್ತು ಸಂಯೋಜನೆಯ ಹೆಸರಿನಲ್ಲಿ 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯಮಟ್ಟದ ಸಮಾವೇಶವನ್ನು ಮಾರ್ಚ್ 1 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. 

ಕಳೆದ ಮೂರು ವರ್ಷಗಳಿಂದ ಹಿಂದುಳಿದ ವರ್ಗಗಳ ಹಾಗೂ ಹಲವು ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಗೊಂಡಿಲ್ಲ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಉನ್ನತ ಶಿಕ್ಷಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿದ್ದು, ಅವರ ಶೈಕ್ಷಣಿಕ ಜೀವನ ಬಿಕ್ಕಟ್ಟಿಗೆ ಸಿಲುಕಿದೆ. 

ಮತ್ತೊಂದೆಡೆ ‘ಸಂಯೋಜನೆ’ ಹೆಸರಿನಲ್ಲಿ ರಾಜ್ಯ ಸರ್ಕಾರ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದರಿಂದ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರರಾಗಲಿದ್ದಾರೆ. 

ಈ ಗಂಭೀರ ವಿಷಯಗಳ ಕುರಿತು ನಡೆಯುತ್ತಿರುವ ಸಮಾವೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಮಾವೇಶಕ್ಕೆ ಭಾಷಣಕಾರರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪ ಕುಲಪತಿ  ಪ್ರೊ. ಎ. ಮುರಿಗೆಪ್ಪ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್, ಸಾಮಾಜಿಕ ಹೋರಾಟಗಾರ ಉಗ್ರನರಸಿಂಹಗೌಡ ಆಗಮಿಸಲಿದ್ದಾರೆ. 

ಎಐಡಿಎಸ್‌ಓ ರಾಜ್ಯ ಖಜಾಂಚಿ  ಸುಭಾಷ್ ಮಾತನಾಡಲಿದ್ದು, ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್ ತಿಳಿಸಿದ್ದಾರೆ.

error: Content is protected !!