ನಾಳೆ ಕ್ಷತ್ರಿಯ ಮರಾಠ ಸಮಾಜದ ನೂತನ ಭವಾನಿ ಕಲ್ಯಾಣ ಮಂಟಪದ ಉದ್ಘಾಟನೆ

ದಾವಣಗೆರೆ, ಫೆ.19- ಜಿಲ್ಲಾ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿ ನೂತನ `ಭವಾನಿ ಕಲ್ಯಾಣ ಮಂಟಪ’ ಉದ್ಘಾಟನೆಯನ್ನು ನಾಡಿದ್ದು ದಿನಾಂಕ 21ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಗವಿಪುರಂ ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಂಘದ ಡಿ. ಮಾಲತೇಶ್‌ ಜಾಧವ್‌ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಕಾರ್ಮಿಕ ಸಚಿವ ಸಂತೋಷ್‌ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌, ಮಾಜಿ ಗೃಹ ಮಂತ್ರಿ ಪಿ.ಜಿ.ಆರ್. ಸಿಂಧ್ಯಾ, ಶಾಸಕ ಶ್ರೀನಿವಾಸ್‌ ಮಾನೆ, ಎಂ.ಜಿ. ಮೂಳೆ, ಮಾಜಿ ಸಚಿವ ಹೆಚ್‌. ಆಂಜನೇಯ ಹಾಗೂ ಡಾ. ಪ್ರಕಾಶ್‌ ಪಾಗೋಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಎಂ.ಬಿ.ಬಿ.ಎಸ್‌ ಓದುತ್ತಿರುವ ಮರಾಠ ಸಮಾಜದ ಐವರು ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಯಶವಂತರಾವ್ ವಿವರಿಸಿದರು.

ಕ್ಷತ್ರಿಯ ಮರಾಠ ಸಮಾಜವು ಎಲ್ಲಾ ಕ್ಷೇತ್ರಗಳಲ್ಲೂ ಹಿಂದೆ ಉಳಿದಿದೆ. ಗಡಿಭಾಗದ ಮರಾಠರಿಂದ ಮಧ್ಯ ಕರ್ನಾಟಕದಲ್ಲಿನ ನಮ್ಮ ಸಮಾಜ ತುಳಿತಕ್ಕೆ ಒಳಗಾಗಿದೆ. ಆದರೆ ನಮ್ಮ ಜೊತೆಗೆ ವಿವಿಧ ಸಮಾಜದವರು ಮತ್ತು ಜನ ಪ್ರತಿನಿಧಿಗಳು ಸಹಕಾರ ನೀಡಿದ್ದರಿಂದ 2ರಿಂದ 3 ಕೋಟಿ ವೆಚ್ಚದಲ್ಲಿ ಈ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಿ. ಮಾಲತೇಶ್‌ ರಾವ್‌ ಜಾಧವ್‌, ಕಾರ್ಯದರ್ಶಿ ಯಲ್ಲಪ್ಪ ಢಮಾಳೆ, ಸತೀಶ್‌ ಜಾಧವ್‌, ಗಣೇಶ್‌ ರಾವ್‌, ಯಲ್ಲಪ್ಪ ಜೊಳ್ಳಿ, ರಾಮಚಂದ್ರರಾವ್‌ ಇದ್ದರು.

error: Content is protected !!