ದಾವಣಗೆರೆ, ಫೆ.12- ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು ಹಾಗೂ ಗವ್ಯ ಉತ್ಪನ್ನ ಬಳಕೆಯ ಪ್ರಚಾರ ಮಾಡುವ ಉದ್ದೇಶದಿಂದಾಗಿ `ನಂದಿ ರಥಯಾತ್ರೆ’ ನಾಳೆ ದಿನಾಂಕ 13 ಮತ್ತು 14ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಕುಮಾರ ಸ್ವಾಮಿ ಬಿಳಿಚೋಡು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋ ಸೇವಾ ಗತಿವಿಧಿ, ರಾಧ ಸುರಭಿ ಗೋ ಮಂದಿರ ಹಾಗೂ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ಈ ರಥಯಾತ್ರೆ ನಡೆಯುತ್ತಿದೆ ಎಂದು ಹೇಳಿದರು.
ಈಗಾಗಲೇ 2024ರ ಡಿ.31ರಿಂದ ನಂದಿ ರಥಯಾತ್ರೆ ಪ್ರಾರಂಭವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ್ದು, ಇದೀಗ ಹರಿಹರ ಮಾರ್ಗವಾಗಿ ದಾವಣಗೆರೆಗೆ ಬರಲಿದೆ ಎಂದು ಮಾಹಿತಿ ನೀಡಿದರು. ನಾಳೆ ದಿನಾಂಕ 13ರ ಗುರುವಾರ ಹರಿಹರಕ್ಕೆ ಆಗಮಿಸಲಿದೆ ಎಂದ ಅವರು, ನಾಡಿದ್ದು ದಿನಾಂಕ 14ರ ಮಧ್ಯಾಹ್ನ 3.30ಕ್ಕೆ ದಾವಣಗೆರೆಗೆ ನಂದಿ ಯಾತ್ರೆ ಆಗಮಿಸಲಿದ್ದು, ನಗರದ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರ ಹಾಗೂ ರಾಮಮಂದಿರ ಸೇರಲಿದೆ ಎಂದು ವಿವರಿಸಿದರು. 88 ದಿನಗಳ ಕಾಲ ರಾಜ್ಯಾದ್ಯಂತ ನಡೆಯುವ ರಥಯಾತ್ರೆಯು 108 ಸ್ಥಾನಗಳಲ್ಲಿ ಗವ್ಯ ಉತ್ಪನ್ನ ಮಾರಾಟ ಕೇಂದ್ರ ಉದ್ಘಾಟನೆ ಆರೋಗ್ಯಯುತ, ಸ್ವಾವಲಂಬಿ, ವಿಶ್ವಗುರು ಭಾರತ ಹಾಗೂ ನಂದಿಯಿಂದ ಫಲವತ್ತಾದ ಮಣ್ಣು, ಶುದ್ಧ ನೀರು-ಗಾಳಿ, ಪರಿಸರ ಸಂರಕ್ಷಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ವೇಳೆ ತಿಪ್ಪಗೊಂಡನಹಳ್ಳಿ ಶಿವಲಿಂಗಪ್ಪ, ಶಾಂತಕುಮಾರ್ ವಿ. ಪುರಾಣಿಕ ಸುದ್ದಿಗೋಷ್ಠಿಯಲ್ಲಿದ್ದರು.