ಭರಮಸಾಗರ, ಫೆ. 12 – ಸಿರಿಗೆರೆಯ ತರಳಬಾಳು ಬೃಹನ್ಮಠದ ಭಾವೈಕ್ಯತಾ ಹಬ್ಬವಾದ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ತೆರೆದ ವಾಹನದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಬೆಳ್ಳಿಪಲ್ಲಕ್ಕಿ ಉತ್ಸವವು ತೆರೆದ ವಾಹನದಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳೊಂದಿಗೆ ಬುಧವಾರ ಭರಮಸಾಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ಮೆರವಣಿಗೆಯು ಸಾಮಿಲ್ ಶಿವಣ್ಣ ಮನೆಯಿಂದ ಬಿಚ್ಚುಗತ್ತಿ ಭರಮಣ್ಣನಾಯಕನ ಮಹಾವೇದಿಕೆಯ ಬಳಿ ಸಾಗಿತು. ಪ್ರತಿವರ್ಷದ ಶ್ರೀಮಠದ ಸಂಪ್ರದಾಯದಂತೆ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಶ್ರಿಮಠದ ವಿದ್ಯಾರ್ಥಿಗಳು ಶಿವಧ್ವಜ ಹಿಡಿದು, ಮಹಿಳೆಯರು ಬಣ್ಣದ ಸೀರೆಯನ್ನುಟ್ಟು ಕುಂಭಮೇಳ ಹೊತ್ತು, ಅಪಾರ ಭಕ್ತಗಣವು ಡೊಳ್ಳುಕುಣಿತದ ಜೊತೆಗೆ ಸಾಗಿದರು.
ಗ್ರಾಮದ ಪ್ರತಿ ಬೀದಿಗಳ ಗ್ರಾಮಸ್ಥರು ತಳಿರು ತೋರಣ ಹಾಗೂ ಮಹಿಳೆಯರು ರಂಗೋಲಿ ಹಾಕಿ ಭಕ್ತಿ ಸಮರ್ಪಿಸಿದರು.
ಮೆರವಣಿಗೆಗೆಯಲ್ಲಿ ಕಡೂರಿನ ಪುರುಷ ಮತ್ತು ಮಹಿಳಾ ವೀರಗಾಸೆ, ಆಂಜನೇಯ ಗೊಂಬೆ, ಶಿವ ಗೊಂಬೆ, ಬೆಳ್ತಂಗಡಿಯ ನವಿಲು ಕುಣಿತ, ಗಾರುಡಿ ಗೊಂಬೆ, ಚೀಳಂಗಿಯ ಕಹಳೆ, ಹುಲ್ಲೇಹಾಳ್ನ ಪುರುಷ ಡೊಳ್ಳು, ಕೊಡಗವಳ್ಳಿಯ ನಾಸಿಕ್ ಡೋಲು, ಕಹಳೆ ಮತ್ತು ಛತ್ರಿ ಚಂಡೆವಾದ್ಯ, ಹುಲ್ಲೂರಿನ ಖಾಸಾ ಬೇಡರ ಪಡೆ, ಮಹಿಳಾ ತಮಟೆ, ಮೈಸೂರಿನ ಪೂಜಾ ಕುಣಿತ, ಸಾಗರದ ಮಹಿಳಾ ಡೊಳ್ಳು ತ್ರಾಶ್ವಾದ್ಯ, ಗೊರವರ ಕುಣಿತ, ತ್ರಾಶ್, ದಾವಣಗೆರೆಯ ನಂದಿಧ್ವಜ ಕುಣಿತ, ಹಂಪನೂರಿನ ನಾಸಿಕ್ಡೋಲು, ಹೊಸದುರ್ಗದ ವೀರಗಾಸೆ, ಕೊಡಗವಳ್ಳಿಯ ಅರಸನಗಟ್ಟದ ಅರೆವಾದ್ಯ, ಕೊಳಹಾಳ್ ಭಜನೆ, ವೀರಗಾಸೆ ಸೇರಿದಂತೆ ಇಪ್ಪತ್ತು ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿ ನೋಡುಗರ ಮನಸೂರೆಗೊಂಡವು.
ರಾಜ್ಯದ ನಾನಾ ಭಾಗಗಳಿಂದ ಅಪಾರ ಶ್ರೀಮಠದ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನ ಆಶೀರ್ವಾದ ಪಡೆದರು.