ದಾವಣಗೆರೆ, ಜ. 30- ಕ್ಯಾನ್ಸರ್ ಕಾಯಿಲೆ ಕುರಿತು ಜನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಎಸ್.ಎಸ್.ಕೇರ್ ಟ್ರಸ್ಟ್ ಮತ್ತು ಬಾಪೂಜಿ ಎಜುಕೇಶನಲ್ ಅಸೋಸಿಯೇಷನ್ ಸಹಯೋಗದಲ್ಲಿ ಫೆ. 2 ರಂದು ಬೆಳಿಗ್ಗೆ 8.30 ಕ್ಕೆ ನಗರದ ಗುಂಡಿ ವೃತ್ತದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸರ್ಜಿಕಲ್ ಅಂಕಾಲಜಿಸ್ಟ್ ಡಾ. ಅಜಯ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯು 2009 ರಲ್ಲಿ ಪ್ರಾರಂಭವಾಗಿದ್ದು, ಸಾರ್ವಜನಿಕರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ. ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್, ಗುದದ್ವಾರ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್, ಬಾಯಿ, ಕುತ್ತಿಗೆ ಮತ್ತು ಗಂಟಲು ಕ್ಯಾನ್ಸರ್ ಸೇರಿದಂತೆ ಸರ್ಜರಿ, ಕಿಮೋಥೆರಫಿ, ಅತ್ಯಾಧುನಿಕ ರೆಡಿಯೇಷನ್ ಸೌಲಭ್ಯವಿದೆ ಎಂದು ತಿಳಿಸಿದರು.
ಈ ಆಸ್ಪತ್ರೆಯಲ್ಲಿ ಎಪಿಎಲ್, ಬಿಪಿಎಲ್, ಯಶಸ್ವಿನಿ ಯೋಜನೆ, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಇನ್ಸೂರೆನ್ಸ್ ಯೋಜನೆಯ ಸೌಲಭ್ಯಗಳು ದೊರಕಲಿವೆ. ಹೆಚ್ಚಿನ ಮಾಹಿತಿಗಾಗಿ 9632377719 ಗೆ ಸಂಪರ್ಕಿಸಲು ಕೋರಿದರು.
ಎಸ್.ಎಸ್. ಕೇರ್ ಟ್ರಸ್ಟ್ ಕೋರ್ ಕಮಿಟಿ ಸದಸ್ಯ ಡಾ.ಮೂಗನಗೌಡ ಮಾತನಾಡಿ, 2019 ರಿಂದ ಸ್ಪಂದನದ ಮೂಲಕ ಸ್ತನ ಕ್ಯಾನ್ಸರ್, ಸರ್ವೈಕಲ್ ಕ್ಯಾನ್ಸರ್ ತಪಾಸಣೆ ನಡೆಸಿಕೊಂಡು ಬರಲಾಗುತ್ತಿದ್ದು, ಬೇತೂರು ರಸ್ತೆಯಲ್ಲಿರುವ ಎಸ್.ಎಸ್. ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸ್ತನ ಕ್ಯಾನ್ಸರ್ ಗುರುತಿಸಿ ಉಚಿತ ಸ್ಕ್ರೀನಿಂಗ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಾಲ್ನಡಿಗೆ ಜಾಥಾ ಗುಂಡಿ ವೃತ್ತದಿಂದ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತದ ಮೂಲಕ ಹೈಸ್ಕೂಲ್ ಮೈದಾನದಲ್ಲಿ ಕೊನೆಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಧನ್ಯಕುಮಾರ್, ಡಾ. ಮಾಲತೇಶ್ ಉಪಸ್ಥಿತರಿದ್ದರು.