ನಗರದಲ್ಲಿ ಇಂದು ಹುತಾತ್ಮರ ದಿನಾಚರಣೆ

ದಾವಣಗೆರೆ,ಜ.29- ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಾಳೆ ದಿನಾಂಕ 30 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಾಂಧೀಜಿ ಹುತಾತ್ಮರಾದ ದಿನವೇ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರಿಗೆ, ಹುತಾತ್ಮ ಸೈನಿಕರಿಗೆ ಹಾಗೂ ರೈತ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಗುವುದು ಎಂದರು.

ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ರೈತ ಸಂಘದ ಜಿಲ್ಲಾಧ್ಯಕ್ಷ ರಾಂಪುರದ ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಬಿ.ಆರ್. ಪಾಟೀಲ್, ಕೆ.ಎಸ್. ಬಸವಂತಪ್ಪ, ಕೆ.ಪಿ. ದರ್ಶನ್ ಪುಟ್ಟಣ್ಣಯ್ಯ,  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, ಪತ್ರಕರ್ತ ಅಜಿತ್ ಹನುಮಕ್ಕನವರ್, ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ. ಶಿವಣ್ಣ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ಕೋಮು ಗಲಭೆ ಸಂತ್ರಸ್ತರಿಗೆ 25 ಲಕ್ಷ ರೂ.ಪರಿಹಾರ ನೀಡುತ್ತಾರೆ. ಆದರೆ ರೈತ ಹುತಾತ್ಮರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸಮಿತಿ ನೇಮಕ ಮಾಡಿ, ಕಡಿಮೆ ಪರಿಹಾರ ನೀಡುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಜಿನಪ್ಪ ಪೂಜಾರ್, ಕೆ.ಜಿ. ಯಲ್ಲಪ್ಪ, ತಿರುಮಲೇಶ್, ಸಿ.ಎಸ್. ಚಂದ್ರಶೇಖರ್, ಚಂದ್ರಶೇಖರ್ ಹೊಲಗೇರಿ, ಹೆಚ್. ವಿಜಯಕುಮಾರ್, ಶಿವಯೋಗಯ್ಯ, ಪ್ರಕಾಶ್ ನಲ್ಲೂರು, ಲೋಕನಗೌಡ್ರು ಉಪಸ್ಥಿತರಿದ್ದರು. 

ಹುತಾತ್ಮರು : ದಾವಣಗೆರೆಯ ಹಳ್ಳೂರ್ ನಾಗರಾಜಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಂದೂರು ಕ್ಯಾಂಪ್ ನಿಂಗಪ್ಪ ಬಿದರಕುಂದಿ, ಹಮಾಲಿ ತಿಮ್ಮಣ್ಣ, ಮಾಗಾನಹಳ್ಳಿ ಹನುಮಂತಪ್ಪ, ಹದಡಿ ನಿಂಗಪ್ಪ ಈ ಐವರು ದೇಶದ ಸ್ವಾತಂತ್ರ್ಯಕ್ಕಾಗಿ 1942ರಲ್ಲಿ ಬ್ರಿಟಿಷರ ಗುಂಡಿಗೆ ಎದೆಕೊಟ್ಟವರು.  

 ಮಾಜಿ ಮಂತ್ರಿ  ಹೆಚ್.ಸಿದ್ಧವೀರಪ್ಪ, ಶ್ರೀಮತಿ ಬಳ್ಳಾರಿ ಸಿದ್ಧಮ್ಮ,  ಬಿ.ಜಿ.ಕೊಟ್ರಪ್ಪ,  ಶಿವಾನಂದಸ್ವಾಮಿ,  ಕಾಸಲ್ ಶ್ರೀನಿವಾಸ ಶೆಟ್ರು, ನಾರಾಯಣರಾವ್ ಗಾಯಕ್‍ವಾಡ, ಗುರುದೇವಯ್ಯ ನಿಶಾನಿಮಠ್, ಕೆ.ಹೆಚ್.ಸಿದ್ಧಪ್ಪ, ಇಟಗಿ ವೇದಮೂರ್ತಿ, ಯಲಿಗಾರ್ ಬಸಪ್ಪ, ಕೆ.ಎಸ್.ಸಿದ್ಧಪ್ಪ, ಎಸ್.ಆರ್.ಗುಂಡಪ್ಪ,, ಕೊಟಗಿ ಸಿದ್ಧಲಿಂಗಪ್ಪ, ಕಂಚಿಕೆರೆ ಚನ್ನಬಸಪ್ಪ, ಎನ್.ಜಿ. ಮುರುಗೇಂದ್ರಯ್ಯ ನಿಶಾನಿಮಠ್, ಎನ್.ಎಂ.ಚಂದ್ರಶೇಖರಯ್ಯ, ಬಾಳೆಹೊಲದ ಮರುಳಸಿದ್ಧಪ್ಪ, ಅಂದನೂರು ಗುರುಶಾಂತಪ್ಪ, ಸಿ.ಎಂ.ಕಲ್ಲಪ್ಪ, ಜಿ.ಮುರುಗೇಂದ್ರಯ್ಯ ಇವರುಗಳು ದೇಶಕ್ಕಾಗಿ ದುಡಿದು, ಮಡಿದವರಾಗಿದ್ದಾರೆ.   ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮರುಳಸಿದ್ದಪ್ಪ ಹೆಚ್., ಬಿ.ಎಂ.ಶಿವಲಿಂಗಸ್ವಾಮಿ  ಜೀವಂತವಾಗಿದ್ದಾರೆ. 

ದೇಶದ ರಕ್ಷಣೆಗಾಗಿ ಗಡಿಯಲ್ಲಿ ವೀರ ಮರಣ ಹೊಂದಿದವರು ದಿ.ನಾರಾಯಣರಾವ್ ಸಾವಂತ್ ದಾವಣಗೆರೆ (1971), ದಿ. ನಾಗರಾಜ್ ಎನ್. ನೀಲಗಿರಿಯಪ್ಪ, ಜಡಗನಹಳ್ಳಿ (2008),  ದಿ. ವಸಂತ್ ಬಿ.ಎಸ್.ಎಫ್. ಕಸವನಹಳ್ಳಿ, ಹರಪನಹಳ್ಳಿ (2004),  1992ರಲ್ಲಿ ನಡೆದ ರಸಗೊಬ್ಬರದ ಚಳುವಳಿಯಲ್ಲಿ ಆನಗೋಡು ಬಳಿ  ಗೋಲಿಬಾರ್‍ಗೆ ತುತ್ತಾದವರು  ಕಲ್ಲಿಂಗಪ್ಪ ಓಬೇನಹಳ್ಳಿ,  ನಾಗಲಿಂಗಾಚಾರ್ಯ ಸಿದ್ಧನೂರು.

error: Content is protected !!