ಹರಿಹರ, ಜ.28- ತಾಲ್ಲೂಕಿನ ಸಾರಥಿ ಗ್ರಾಮದ ಆಂಜನೇಯ ದೇವಸ್ಥಾನದ ಗುಡ್ಡಕ್ಕೆ ಹತ್ತಿದ ಬೆಂಕಿ ಹೊತ್ತಿಕೊಂಡು, ಅಂದಾಜು 30 ಎಕರೆ ಬೆಳೆ, 30 ಕ್ಕೂ ಅಧಿಕ ಹುಲ್ಲಿನ ಬಣವೆಗಳು ಭಸ್ಮವಾದ ಘಟನೆ ಭಾನುವಾರ ನಡೆದಿದೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರ ನೆರವಿನಿಂದ ಸತತ ಪ್ರಯತ್ನ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
4 ಎಕರೆ ಅಲಸಂದೆ, 15 ಎಕರೆ ಜೋಳ, 10 ಎಕರೆ ತೊಗರಿ ಸೇರಿದಂತೆ ದನ ಕರುಗಳಿಗಾಗಿ ಶೇಖರಿಸಿ ಇಟ್ಟ ಸುಮಾರು 30 ಕ್ಕೂ ಹೆಚ್ಚು ಬಣವೆಗಳು ಸುಟ್ಟು ಕರಕಲಾಗಿವೆ. ಸಾರಥಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿದ್ದ ಘನ ತ್ಯಾಜ್ಯ ಘಟಕದ ಕಿಟಕಿಗಳ ಮೂಲಕ ಬೆಂಕಿ ಚಾಚಿಕೊಂಡು ಅಲ್ಲಿದ್ದ ಹಸಿಕಸ ಹಾಗೂ ಒಣಕಸ ಸಂಪೂರ್ಣ ಸುಟ್ಟು 50 ಸಾವಿರದಷ್ಟು ಹಾನಿಯಾಗಿದೆ.
ನರೇಗಾ ಯೋಜನೆಯಡಿ ಇತ್ತಿಚಿಗೆ ದೀಟೂರಿನಿಂದ ಸಾರಥಿ ಆಂಜನೇಯ ದೇವಸ್ಥಾನದವರೆಗೆ 900 ಅರಳಿ, ಗೋಣಿ, ಬಸರಿ ಗಿಡ ನೆಟ್ಟಿದ್ದು, ಇವುಗಳಲ್ಲಿ ಹಲವು ಗಿಡಗಳು ಅಗ್ನಿಗಾಹುತಿಯಾಗಿವೆ.
ಸ್ಥಳೀಯ ಪರಿಸರ ಪ್ರೇಮಿ, ಬಿಜೆಪಿ ಮುಖಂಡ ದೀಟೂರು ನಿರಂಜನ್ ಮತ್ತವರ ಸ್ನೇಹ ಬಳಗ
ಬೆಂಕಿ ನಂದಿಸಲು ಸಹಕರಿಸಿದೆ. ಅಗ್ನಿಶಾಮಕ ದಳದ ಪ್ರಭಾರ ಎಎಸ್ಐ ಆರ್.ಸಂಜೀವ್ಕುಮಾರ್
ಸ್ಥಳದಲ್ಲಿ ಬೀಡು ಬಿಟ್ಟಿದ್ದರು.