27 ರಿಂದ 30 ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ
ದಾವಣಗೆರೆ, ಜ.24- ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಇದೇ ದಿನಾಂಕ 27 ರಿಂದ 30 ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ `ನಮ್ಮ ನಡೆ ಸರ್ವೋದಯದೆಡೆಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸರ್ವೋದಯ ರಾಜ್ಯ ಸಂಚಾಲಕ ಶಿವನಕೆರೆ ಬಸವಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪರಿಸರ, ಕೃಷಿ, ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಒಂದಿಷ್ಟು ಸುಧಾರಣೆ ತರುವ ಸಲುವಾಗಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಸದುದ್ಧೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪರಿಸರದ ಜಾಗೃತಿ, ಕೃಷಿಯ ಮರು ಚಿಂತನೆ, ಆರೋಗ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸುಧಾರಣೆ ಸೇರಿದಂತೆ, ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿ ಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ದಿನಾಂಕ 27 ರಂದು ಬೆಳಿಗ್ಗೆ 8 ಗಂಟೆಗೆ ಸಾಣೇಹಳ್ಳಿಯಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಬೇಗೂರು, ಅಜ್ಜಂಪುರ, ಬುಕ್ಕಾಂಬುದಿ, ತಾವರೆಕೆರೆ, ಪಾಂಡೋಮಟ್ಟಿ, ಚನ್ನಗಿರಿ, ದೇವರಹಳ್ಳಿ ಮೂಲಕ ಸಂತೇಬೆನ್ನೂರಿನಲ್ಲಿ ಮುಕ್ತಾಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವೋದಯದ ಬಲ್ಲೂರು ರವಿಕುಮಾರ್, ಕೆ.ಜಿ. ಯಲ್ಲಪ್ಪ, ಗೋಪನಾಳು ರುದ್ರೇಗೌಡ, ಆವರಗೆರೆ ರುದ್ರಮುನಿ, ಹೆಗ್ಗೆರೆ ರಂಗಪ್ಪ ಉಪಸ್ಥಿತರಿದ್ದರು.