ದಾವಣಗೆರೆ, ಜ. 24- ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾಸಂಸ್ಥೆಯ 1988-89, 1999-2000ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ನಾಳೆ ದಿನಾಂಕ 25ರ ಶನಿವಾರ ಸಂಸ್ಥೆಯ ರಜತಮಹೋತ್ಸವ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಂಡಿರುವುದಾಗಿ ಎಂ.ಶ್ರೀಕಾಂತ್ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಸಾಂಸ್ಕೃತಿಕ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಡಿ.ಆರ್.ಆರ್. ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಆರ್. ಶ್ರೀನಿವಾಸ ಮೂರ್ತಿ, ಆಡಳಿತಾಧಿಕಾರಿ ಬಸವರಾಜಪ್ಪ ಎಂ. ಹಾಗೂ ಶಿಕ್ಷಕ ವೃಂದ ಉಪಸ್ಥಿತರಿರಲಿದ್ದಾರೆ ಎಂದರು. 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು, 30ಕ್ಕೂ ಹೆಚ್ಚು ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಟಿ.ಎಂ. ಆಂಜನೇಯ, ಕೆ.ಬಿ. ಮಂಜುನಾಥ್ ಉಪಸ್ಥಿತರಿದ್ದರು.