ದೊಡ್ಡಬಾತಿಯಲ್ಲಿ ಇಂದಿನಿಂದ 3 ದಿನ ಉಡಿಸಲಮ್ಮನ ಸಂಭ್ರಮೋತ್ಸವ

ಮಾನವನು ಮೂಲದಲ್ಲಿ ಕಾಡಿನಲ್ಲಿದ್ದು, ಕಾಡು ಮನುಷ್ಯನಾಗಿ ಪ್ರಾಣಿ ಜೀವನದಂತೆ ನಡೆಸುತ್ತಿದ್ದುದು ಪ್ರಾಗೈತಿಹಾಸಿಕದ ಅವಲೋಕನದಿಂದ ತಿಳಿದುಬರುತ್ತದೆ. ಕಾಡಿನಲ್ಲಿ ಹಸಿಮಾಂಸ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ, ಜೀವನ ಕ್ರಮದಲ್ಲಿ ಬದಲಾವಣೆ ಹೊಂದಿ, ಬೇಟೆಯಾಡುವು ದನ್ನು ಕಲಿತು, ಕ್ರಮೇಣ ಬೆಂಕಿಯ ಬಳಕೆಯಿಂದ ಹಸಿ ಮಾಂಸವನ್ನು ಬೇಯಿಸಿಕೊಂಡು ತಿನ್ನಲು ತೊಡಗಿ, ಬರ ಬರುತ್ತಾ ವಿಶಾಲವಾದ ಬಯಲು ಪ್ರದೇಶದಲ್ಲಿ ನೆಲೆನಿಂತು, ಮೊದಮೊದಲು ನಕ್ರಗಳಿಂದ ತದನಂತರ ಎತ್ತುಗಳ ಸಹಾಯದಿಂದ ಕೃಷಿಯಲ್ಲಿ ನಿರುತನಾದನು. ಹೀಗೆಯೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಶ್ರಯ ತಾಣಗಳನ್ನು ನಿರ್ಮಿಸಿ ಕೊಂಡ ವಿಕಾಸದ ಪ್ರಥಮ ಹಂತವನ್ನು ಕಾಣುತ್ತೇವೆ.

ನಂತರ ಬೆಳವಣಿಗೆಯಾದಂತೆ ಸಾಂಘಿಕ ಜೀವನದಲ್ಲಿ ಆಸಕ್ತಿಯೊಂದಿ, ಕೌಟುಂಬಿಕ ಬದುಕನ್ನು ಪ್ರಾರಂಭಿಸಿ, ಅದ್ಭುತಗಳನ್ನು ಪೂಜಿಸತೊಡಗಿ, ಇವುಗಳೇ ದೇವರ ಸ್ವರೂಪಹೊಂದಿ ನಂಬಿದನು. ಕಾಲಾಂತರದಲ್ಲಿ ಆರಾಧನೆಯ  ಹಿಂದಿರುವ ಭಯ-ಭಕ್ತಿಯ ಸ್ವರೂಪ ಹೊಂದಿ ದೈವ ಕಲ್ಪನೆ ಸ್ಥಿರತೆಯನ್ನು ಪಡೆದು, ದೇವರನ್ನು ಸೃಷ್ಠಿಸಿಕೊಂಡು ಪೂಜಿಸಲು ಪ್ರಾರಂಭಿಸಿದನು.

ಹೀಗೆಯೇ ಪೂಜಾ ವಿಧಾನಗಳ ತಳಹದಿಯ ಮೇಲೆ `ನೀನು ನನ್ನನ್ನು ಉದ್ದಾರ ಮಾಡಿದರೆ, ನಾನು ನಿನಗೆ ಪ್ರತಿಯಾಗಿ ಬಲಿಯನ್ನೋ ಅಥವಾ ಇನ್ನಾವುದನ್ನೋ ಕಾಣಿಕೆಯಾಗಿ ಅರ್ಪಿಸುವೆನು’ ಎಂದು ತನ್ನ ಪ್ರಯೋಜಕ ದೃಷ್ಟಿಯಿಂದ ಪ್ರಾರ್ಥಿಸಿಕೊಂಡು, ಕಟ್ಟಳೆಗಳನ್ನು ನಿರ್ಮಿಸಿಕೊಂಡು, ಪಿತೃದೇವತಾ-ಮಾತೃ ದೇವತಾ ಪರಿಕರಗಳ ರೂಢಿಗೆ ಸರ್ವವಿಧಿತನಾದನು.

ಪ್ರಾಚೀನ ಕಾಲದಿಂದಲೂ ತಾಯಿಗೆ ದೇವತೆಯ ಸ್ಥಾನವನ್ನು ಅರ್ಪಿಸಿ, ಮಾತೃದೇವತಾ ಪದ್ಧತಿಯನ್ನು ರೂಢಿಸಿಕೊಂಡಿರುವುದನ್ನು ಕಾಣುತ್ತೇವೆ. ಪ್ರಕೃತಿಯ ಬಣ್ಣ ಕೆಂಪಾಗಿದುದ್ದರಿಂದ ಕುಂಕುಮ, ಕೆಂಪು ದಾಸವಾಳವೂ, ರಕ್ತವಸ್ತ್ರ, ರಕ್ತಫಲ ಮೊದಲಾದವುಗಳು ಪ್ರಿಯವೆಂದು ಭಾವಿಸಿ, ಅಲಂಕಾರಗೊಳಿಸಿ ಪೂಜಿಸ ತೊಡಗಿದನು. ಕಾಲಕ್ರಮೇಣ ಪ್ರಕೃತಿಯಲ್ಲಿಯ ಹುಟ್ಟು-ಸಾವುಗಳಿಗೆ ‘ಹೆಣ್ಣೇ’ ಕಾರಣ ಎಂಬ ಅಂಶ ಪ್ರಮುಖವಾಗಿ ಕಂಡಾಗ ಸರ್ವ ಸಹಕಾರ ಮೂರ್ತಿಯಾದ ಸ್ತ್ರೀಯನ್ನು ಮಾತೃ ದೇವತೆಯ ಸಂಕೇತವೆಂದು ಭಾವಿಸಿದನು. ಆದುದರಿಂದ ಸ್ತ್ರೀಯನ್ನು ಮಾಹಾಮಾತೆಯೆಂದು, ಸಾರ್ವಕಾಲಿಕ, ಕನ್ಯೆಯೆಂದು, ದಿವ್ಯಸತಿ, ಮಹಾಸಂಹಾರಿಣಿಯೆಂದು ಅತ್ಯಂತ ಗೌರವ ಸ್ಥಾನ ನೀಡಿ ಪೂಜಿಸುತ್ತಾ ಬಂದಿರುವುದು ಸತ್ಯಾಸತ್ಯವಾಗಿದೆ.

ಸಂಘ ಜೀವನ ಪ್ರಜ್ಞೆಯಿಂದ ಅನೇಕ ಬಗೆಯ ಸಂಸ್ಕಾರಗಳು ಮೂಡಿ ಬಂದುದರ ಫಲವಾಗಿ ಗ್ರಾಮ ದೇವತೆಗಳ ಉಗಮ ವಿಕಾಸವಾಯಿತು. ತನಗೆ ಇಷ್ಟಬಂದ ದೇವತೆಗಳ ನಾಮಕರಣ ಮಾಡಿಕೊಂಡು ಆರಾಧಿಸಲು ತೊಡಗಿದನು. ತನಗೆ ತೊಂದರೆಗಳಾದಾಗದ ನಿವಾರಣೆಗಾಗಿ ಸಣ್ಣ ಪುಟ್ಟ ದೇವತೆಗಳನ್ನು ನಿರ್ಮಿಸಿಕೊಡನು. ಇದರ ಪರಿಣಾಮವಾಗಿಯೇ ಇಂದು ಗ್ರಾಮಗಳಲ್ಲಿ ಊರಮ್ಮ, ಹಟ್ಟಿಯಮ್ಮ, ಕೇರಿಯಮ್ಮ, ದುರುಗಮ್ಮ, ಕೆಂಚಮ್ಮ, ಉಡಸಲಮ್ಮ, ಮಾರಿಯಮ್ಮ, ಕಾಳಮ್ಮ, ಕರಿಯಮ್ಮ ಇತ್ಯಾದಿ ಹೆಸರುಗಳನ್ನುಳ್ಳವಗಳಾಗಿ ಜಾತ್ರೆಗೆ, ಹರಕೆಗೆ ಪರಿಗಣಿತವಾದವು.

ಪ್ರದೇಶದ ವೈಶಿಷ್ಟ್ಯತೆಗನುಗುಣವಾಗಿ ದೇವತಾ ಕಾರ್ಯದಲ್ಲಿ ಭಕ್ತರು ಪಾಲ್ಗೊಳ್ಳುವಿಕೆ ಮತ್ತು ಅವರವರ ಸ್ಥಾನಕ್ಕೆ ಸರಿಯಾಗಿ ಅವರ ಆಚರಣೆಗಳು, ಕಾರ್ಯಗಳು ಬೇರೆ ಬೇರೆಯಾಗಿರುತ್ತವೆ. ಈ ಸೇವಾ ಕರ್ತವ್ಯಗಳ ಹಿಂದೆ ವೈಯಕ್ತಿಕವಾದ ಅಭೀಷ್ಠೆ, ಫಲಾಪೇಕ್ಷೆ ಅಡಗಿರುವುದನ್ನು ಕಾಣಬಹುದು. ಮಗುವಿನ ಜನನ, ಮಕ್ಕಳ ಜವಳ, ಮದುವೆ-ಮುಂಜಿ, ಬೀಜ ಬಿತ್ತುವಾಗ, ರಾಶಿ ಮಾಡುವಾಗ ಹೀಗೆ ಅನೇಕ ಸಂದರ್ಭಗಳಲ್ಲಿ ದೇವತೆಗೆ ಎಣ್ಣೆ ಬತ್ತಿಯನ್ನು ಕೊಡುವ ಸಂಪ್ರದಾಯ ಸಾಮನ್ಯವಾಗಿ ಕಂಡುಬರುತ್ತದೆ. ಹರಕೆಯನ್ನು ಆಚರಣೆಗೆ ತರುವುದರ ಮೂಲಕ ಒಂದು ಬಲವಾದ ಜನಪದ ಸಂಪ್ರದಾಯ ನಿರ್ಮಾಣವಾಗಿ ಎಲ್ಲಾ ವರ್ಗದವರು ಏಕತೆಯಿಂದ ಒಳಗೊಂಡು ಊರಿನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಗ್ರಾಮದೇವತೆಯ ಹಬ್ಬ ಆಚರಣೆಗೆ ಬಂದಿರುವುದನ್ನು ಕಾಣಬಹುದಾಗಿದೆ.

ಹಬ್ಬದ ಆಚರಣೆಯು ಬಹು ಸಂಪ್ರದಾಯ ಮತ್ತು ನಡೆ-ನುಡಿಯಿಂದ ಕೂಡಿರುತ್ತದೆ. ಊರಿನ ಹಿರಿಯರ ಸಮ್ಮುಖದಲ್ಲಿ ಕಿರಿಯರು ಭಾಗವಹಿಸಿ ನೆರವೇರಿಸುತ್ತಾರೆ. ಹನ್ನೆರಡು ಜನ ಆಯಗಾರರನ್ನೊಳಗೊಂಡು ಅಮ್ಮನ ಹಬ್ಬ ಪ್ರಾರಂಭವಾಗುತ್ತದೆ. ಊರಿನ ಜನಗಳ ಭಾವನೆಯಲ್ಲಿ ಉಡಸಲಮ್ಮ ಸಾಂಕ್ರಮಿಕ ರೋಗಗಳ ದೇವತೆಯೆಂದು, ರೋಗಗಳ ರೂಪದಲ್ಲಿ ಬರುವಳೆಂದು, ಬಂದ ಈ ರೋಗ ನಿವಾರಣೆಗೆ ಹಬ್ಬವೇ ಮೂಲವೆಂದು ಕಲ್ಪಿಸಿಕೊಳ್ಳಲಾಯಿತು. ಇದಕ್ಕೆ ಪ್ರತಿಯಾಗಿ ಈ ಉಡಸಲಮ್ಮ ಊರಲ್ಲೇ ಇರುವವಳು ಹಾಗೂ ಉಗ್ರ ದೇವತೆ ಎಂದು ಪರಿಗಣಿಸಿ, ‘ಬಲಿ’ ರೂಪದಲ್ಲಿ ಸಾಂಕೇತಿಸಲಾಯಿತು. ಇದರ ಜೊತೆಯಲ್ಲಿ ಈ ದೇವತೆಗೆ ಎಲ್ಲ ಜನಾಂಗದವರೂ ನಡೆದುಕೊಳ್ಳುತ್ತಾರೆ ಎಂಬ ಮಾತು ಜಾತಿಯನ್ನು ಪರಿಗಣಿಸದೆ ಸಮ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವುದರ ಸೂಚಕವಾಗಿರುತ್ತದೆ.

ಉಡಸಲಮ್ಮನ ಹಬ್ಬಕ್ಕೆ ಬಿಟ್ಟ ಕೋಣ ಯಾವ ಹೊಲವನ್ನು ಹೊಕ್ಕು  ಮೇದರೂ ಹೊಡೆಯುವಂತಿಲ್ಲ. ಹಬ್ಬ 15 ದಿನ ಇರುವಾಗ ಮಾದಾರ ಮನೆಯವರು ಅದನ್ನು ಹಿಡಿದು ‘ಕೋಣನ ಸಾರುವರು’ ಅಂದರೆ ಹಬ್ಬ ಆರಂಭವಾದಂತೆ, ಮೆರವಣಿಗೆಯಲ್ಲಿ ಕೋಣ ಪ್ರತಿಯೊಬ್ಬರ ಮನೆಯ ಬಳಿಗೆ ಬಂದಾಗ ಅದರ ತಲೆಗೆ ಎಣ್ಣೆ ಹಾಕಿ, ಪೂಜಿಸಿ, ಅಕ್ಕಿ-ಬೇಳೆ- ಬೆಲ್ಲ- ತರಕಾರಿ- ಮೀಸಲುಡಿಗೆ ಕೊಡುವರು. ಊರ ತುಂಬಾ ಮೆರವಣಿಗೆಯಾದ ಮೇಲೆ ಪೂಜಾರಿ ಮೊದಲು ಪೂಜೆ ಮಾಡಿ, ಹೊಸ ಸೀರೆ ಉಡಿಸಿ, ಬೇವಿನ ಸೊಪ್ಪು ತೊಡಿಸಿ, ಕೊರೆ ಹಾಕಿ, ಶೃಂಗಾರ ಮಾಡಿ ಮೀಸಲು ನೈವೇದ್ಯ  ಮಾಡಿದ ನಂತರ ಊರಲ್ಲಿ ಮೆರವಣಿಗೆ, ರಣವಾದ್ಯ, ಆಸಾದಿಗಳು ಬೈಯುವುದು ನಡೆಯುತ್ತದೆ. ಬೆಳಗಿನ ಜಾವದ ಹೊತ್ತಿಗೆ ಅಮ್ಮನನ್ನು ಗದ್ದುಗೆಗೆ ತರುವರು, ಮಂಗಳಾರತಿಯ ನಂತರ ಕೋಣವನ್ನು ಪೂಜೆ ಮಾಡಿ, ತಳಾರನು ಅಲಗು ಸೇವೆ ಮಾಡಿದ ಮೇಲೆ ಅದರ ದೇಹದಿಂದ ದೊರೆತ ಅಂಶವನ್ನು ಜೋಳದಲ್ಲಿ ಮಿಶ್ರಣಮಾಡಿ ಅದೇ ಊರಿನ ಜನರು ಊರ ಸುತ್ತ ಚರಗ ಚೆಲ್ಲುವರು, ಕೋಣನ ನೇಣವನ್ನು ತೆಗೆದು  ತಲೆಯ ಮೇಲಿಟ್ಟು ಮುದ್ದೆಯ ಕಟ್ಟೆಕಟ್ಟಿ ದೀಪ ಹಚ್ಚುವರು, ಅದರ ಬಲಗಾಲು ಕಡಿದು ಬಾಯಲ್ಲಿಡುವರು. ಲೆಕ್ಕವಿಲ್ಲದಷ್ಟು ಕುರಿ, ಕೋಳಿಗಳು ಬಲಿಯಾಗುವವು, ಬೆಳ್ಳಿಯ ಮುಖ, ಸಣ್ಣಛತ್ರಿ, ಪಾದ, ಆಯುಧಗಳೆಲ್ಲಾ ಪೂಜೆಯ ನಂತರ ಮರುದಿನ ಸಂಬಂಧಪಟ್ಟ ಯಜಮಾನರು ತಮ್ಮ ಮನೆಯಲ್ಲಿ ತೆಗೆದಿಟ್ಟುಕೊಳ್ಳುವರು ಮತ್ತೆ ಅವು ಮುಂದಿನ ಹಬ್ಬಕ್ಕೆ ಹೊರಬರುವುದು.

ಕುಂಕುಮ, ಅರಿಶಿಣ, ಅಕ್ಕಿ ಇವುಗಳಿಂದ ‘ರಂಗ’ಬರೆದು, ದೇವಿಗೆ ಕರಿಮಣಿ, ತಾಳಿ, ಬಿಳಿ ಮುತ್ತಿನ ಸರ, ಲಕ್ಕಿ ಎಲೆಗಳ ಪತ್ರಿ, ಹೊ ಮಾಲೆ, ರಂಗದ ಎದರು ಎಲೆ ಅಡಿಕೆ, ಬೆಲ್ಲ, ರೊಕ್ಕ, ದೇವಿಯ ಕಾಲುಗಳ ಮಧ್ಯೆ ಒಣ ಕೊಬ್ಬರಿ ಬಟ್ಟಲು, ಉತ್ತುತ್ತಿ, ಬೆಲ್ಲ, ಎದುರಿಗೆ ಅಕ್ಕಿಯ ಹುಗ್ಗಿಯ ಪ್ರಸಾದ, ಹರಕೆ, ದೇವಿನುಡಿ ಇತ್ಯಾದಿಗಳಿಂದ ಪೂಜೆ ಕೂಡಿರುತ್ತದೆ. ಅಮ್ಮನ ಜಾತ್ರೆ ಪ್ರಾರಂಭವಾದಾಗ ಯಾರೂ ಊರುಬಿಡುವಂತಿಲ್ಲ ಒಳಗೆ ಹುಲುಸು ಉಳಿಯಬೇಕೆಂಬ ಕಟ್ಟುಪಾಡು ನಿರ್ಬಂಧವಾಗಿರುತ್ತದೆ. ಆರತಿ, ಅಲಗುಸೇವೆ, ಉರುಳುಸೇವೆ, ಕಂಬಕೀಳುವುದು, ಸಾಗುಹಾಕುವುದು, ದೇವರತ್ತಿದ್ದುವುದು, ದೇವರತರುವುದು, ಉಪಾರ, ಭಂಡಾರ ಕಟ್ಟಿಸುವುದು, ಹೊಳೆಗೆ ಹೋಗುವುದು, ಪಟ್ಟ ಬರೆಯುವುದು, ಬಲಿ ಎರಚುವುದು, ಪೂಜೆ ಕಟ್ಟುವುದು, ಹರಾಜು ಮಾಡುವುದು, ‘ಘಟ’ ತರುವುದು, ‘ಚೌಕಿಮನೆ’ಯ ಶ್ರೇಷ್ಠತೆ ಇತ್ಯಾದಿ ಸಂಪ್ರದಾಯಗಳು ಹಬ್ಬದಲ್ಲಿ ನಡೆಯುವುದು ಕ್ರಮಬದ್ದವಾಗಿರುತ್ತದೆ.

ಗ್ರಾಮ ದೇವತೆಗಳಲ್ಲಿ ಕೆಲವನ್ನು ಕಾಯಿಲೆಯ ದೇವತೆಯೆಂದು ಕರೆಯುವರು, ಊಡಚವ್ವ, ಉಡಿಸಮ್ಮ, ಉಡಸಲಮ್ಮ, ಉಡುಸಲಮ್ಮನ ಸಂಪ್ರದಾಯ ಮಧ್ಯ ಮತ್ತು ಕರ್ನಾಟಕದಲ್ಲಿ ಆಚರಣೆಯಲ್ಲಿದೆ. ‘ಉಡಿ’ ಎಂದರೆ ಒಂದು ಬಗೆಯ ರೋಗ, ಉಣ್ಣು ರೋಗ, ಉಡಿಯಿಂದ ನಿಷ್ಪನ್ನಗೊಳ್ಳುವ ಉಡುಚು ಪದಕ್ಕೆ ತೊಡೆವಾಳು, ಸಂಕದಾಳು, ಕೀವುಉಣ್ಣು, ಕಂಕಳು ತೊಡೆಗಳ ಮಧ್ಯ ಏಳುವ ಬಕ್ಕೆಗಳು ಎಂದರ್ಥವಿದೆ. ಇದು ಒಂದು ಬಗೆಯ  ಗುಹ್ಯ ರೋಗವೆಂದು ಅರ್ಥೈಸಿದೆ. ಉಡುಚಮ್ಮ ರೋಗಗಳ, ಅದರಲ್ಲೂ ಗುಹ್ಯ ಅಥವಾ ಲೈಂಗಿಕ ರೋಗಗಳ ದೇವತೆ ಮತ್ತು ನಿವಾರಣೆಯ ಶಕ್ತಿ ದೇವತೆ ಎಂಬ ಪ್ರತೀತಿಯಿದೆ. ಶಾಸನಗಳಲ್ಲಯೂ ಪ್ರಸ್ತಾಪವಿದೆ. ಕೆಲವು ಗ್ರಾಮಗಳಲ್ಲಿ ತಿಪ್ಪೆಗಳ ಮದ್ಯ ಈ ಗುಡಿಗಳು  ಇರುವುದನ್ನು ಕಾಣಬಹುದು. ಹೀಗೆ ಈ ದೇವತೆ ಜನ, ದನ, ಮಕ್ಕಳಿಗೆ ಕಾಯಿಲೆ ಕಸಾಲೆಯಾದರೆ ಹರಸಿಕೊಳ್ಳುವ ಮತ್ತು ಕಲ್ಯಾಣದ ಒಂದು ದೇವತೆಯಾಗಿ ಗ್ರಾಮಗಳಲ್ಲಿ ನೆಲೆಸಿದ್ದಾಳೆ. ಆದಕಾರಣ ಊರಿನವರು 3 ವರ್ಷಕ್ಕೊಮ್ಮೆಯೋ 6 ವರ್ಷಕ್ಕೊಮ್ಮೆಯೋ ಹಬ್ಬ ಆಚ ರಿಸುವುದರಲ್ಲಿ ತೊಡಗಿರುವುದು ಜನಪದ ಸಂಪ್ರದಾಯದ ಒಂದು ಆದ್ಯ ಕರ್ತವ್ಯವಾಗಿದೆ.

ದೊಡ್ಡಬಾತಿಯಲ್ಲಿ ಇಂದಿನಿಂದ 3 ದಿನ ಉಡಿಸಲಮ್ಮನ ಸಂಭ್ರಮೋತ್ಸವ - Janathavani– ಪ್ರೊ. ಬಾತಿ ಬಸವರಾಜ್, ಶೈಕ್ಷಣಿಕ ಸಲಹೆಗಾರರು, ದವನ್ ಕಾಲೇಜು,  ದಾವಣಗೆರೆ.

error: Content is protected !!