ಕೊಪ್ಪಳ, ಜ.15- ಲಕ್ಷಾಂತರ ಭಕ್ತರ ಸಂಗಮ, ಸಂಭ್ರಮ ಹಾಗೂ ಉದ್ಘೋಷಗಳ ನಡುವೆ ಬುಧವಾರ ನಡೆದ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವದಲ್ಲಿ ಜನಜಾತ್ರೆಯೇ ಕಂಡುಬಂದಿತು.
ಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರೈಸಿದ ಬಳಿಕ ಹೆಸರಾಂತ ಹಿಂದೂಸ್ತಾನಿ ಗಾಯಕ ಪಂಡಿತ್ ಎಂ. ವೆಂಕಟೇಶ ಕುಮಾರ್ ಅವರು ಷಟಸ್ಥಲ ಧ್ವಜ ಏರಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದಾಗ ಭಕ್ತರಲ್ಲಿ ಸಂಭ್ರಮ ಮನೆ ಮಾಡಿತು. ಮೂಲ ಸ್ಥಾನದಿಂದ ಪಾದಗಟ್ಟೆಯತ್ತ ರಥ ಹೊರಟಾಗ ಜನ ಭಕ್ತಿಯಿಂದ ಕೈ ಮುಗಿದರು. ಮರಳಿ ಸ್ವ ಸ್ಥಾನಕ್ಕೆ ಬಂದ ಬಳಿಕ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ವೆಂಕಟೇಶ ಕುಮಾರ್ ‘ನಾನು ಇದೇ ಮಠದ ವಿದ್ಯಾರ್ಥಿಯಾಗಿದ್ದರೂ ಜಾತ್ರೆ ಇಷ್ಟೊಂದು ಅದ್ದೂರಿಯಾಗಿ ಆಗಿದ್ದನ್ನು ಎಂದೂ ನೋಡಿರಲಿಲ್ಲ. ಓದುವಾಗಿನ ಹಾಗೂ ಈಗಿನ ಜಾತ್ರೆಗೆ ಭೂಮಿ–ಆಕಾಶದಷ್ಟು ವ್ಯತ್ಯಾಸವಿದೆ’ ಎಂದು ಬಣ್ಣಿಸಿದರು.
ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ‘ಸಮುದ್ರದ ತುಂಬಾ ನೀರು ಇರುವಂತೆ ಕೊಪ್ಪಳದಲ್ಲಿ ಜಾತ್ರೆ ನಡೆದರೆ ಎಲ್ಲಿ ನೋಡಿದರೂ ಜನಜಾತ್ರೆಯೇ ಇರುತ್ತದೆ’ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ’ಇದು ಜಗತ್ತಿನ ಎಂಟನೇ ಅದ್ಭುತವಾಗಿದ್ದು, ಪಾಲ್ಗೊಂಡಿದ್ದು ಸೌಭಾಗ್ಯ’ ಎಂದು ಹೇಳಿದರು.
ರಥೋತ್ಸವ ಸಂಜೆ ನಡೆದರೂ ಬೆಳಿಗ್ಗೆಯಿಂದಲೇ ಜನ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದು ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಂದ ಎಲ್ಲರಿಗೂ ಸಾವಯವ ಬೆಲ್ಲದ ಜಿಲೇಬಿ, ಮಾದಲಿ, ಜೋಳದ ರೊಟ್ಟಿ ಸೇರಿದಂತೆ ತರಹೇವಾರಿ ಊಟ ನೀಡಲಾಯಿತು.