ದಾವಣಗೆರೆ, ಜ.13- ನಗರದ ಪಿ.ಜೆ ಬಡಾವಣೆಯ 7ನೇ ಮುಖ್ಯರಸ್ತೆಯಲ್ಲಿ 6ಕ್ಕೂ ಅಧಿಕ ಪಾಲಿ ಕ್ಲಿನಿಕ್ಗಳು ಹಾಗೂ ಹೊಸದಾಗಿ 1 ನರ್ಸಿಂಗ್ ಹೋಮ್ ಪ್ರಾರಂಭವಾಗಿದ್ದರಿಂದ ಇಲ್ಲಿಗೆ ಬರುವ ವಾಹನಗಳಿಂದ ತೀವ್ರತರದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ಕ್ಲಿನಿಕ್ಗಳಿಗೆ ಬರುವ ಕಾರು, ಬೈಕ್ ಮತ್ತು ಆಟೋಗಳನ್ನು ಮನೆಯ ಮುಂಭಾಗ ನಿಲುಗಡೆ ಮಾಡುತ್ತಲಿದ್ದು, ಸ್ಥಳೀಯರ ವಾಹನ ನಿಲುಗಡೆಗೆ ಜಾಗ ಇಲ್ಲದಂತಾಗುತ್ತಿದೆ ಮತ್ತು ಹೆಚ್ಚಿನ ವಾಹನ ದಟ್ಟಣೆಯಿಂದ ನಿವಾಸಿಗಳಿಗೆ ಅಡಚಣೆ ಆಗು ತ್ತಿದೆ. ನರ್ಸಿಂಗ್ ಹೋಮ್ ಮತ್ತು ಅಲ್ಲಿರುವ 7 ಪಾಲಿಕ್ಲಿನಿಕ್ ಮುಂದೆ ವಾಹನ ನಿಲ್ಲಿಸದೇ ನಿವಾಸಿಗಳ ಮನೆ ಮುಂದೆ ವಾಹನಗಳನ್ನು ನಿಲ್ಲುಸುತ್ತಿದ್ದಾರೆ. ಈ ಬಗ್ಗೆ ಮೌಖಿಕವಾಗಿ ಮನವಿ ಮಾಡಿಕೊಂಡರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂಗೆ ಬರುವ ಸಾರ್ವಜನಿಕರು ಮತ್ತು ಇಲ್ಲಿನ ಸ್ಥಳೀಯರೇ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ.
ಪಾಲಿಕೆ ಸದಸ್ಯರು ಮತ್ತು ವಿಪಕ್ಷ ನಾಯಕರು ಪಾಲಿಕ್ಲಿನಿಕ್ಗಳ ಲೈಸನ್ಸ್ ರದ್ದುಪಡಿಸಿ ಮತ್ತು ಖಾಲಿ ಜಾಗದಲ್ಲಿ ಕೆಲವು ನಿವಾಸಿಗರು ಹಾಕುತ್ತಿರುವ ಕಸಕ್ಕೆ ದಂಡ ಹಾಕಿ, ಅಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.