ದಾವಣಗೆರೆ, ಜ. 13- ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಗೆ ತೆರಳಿದ್ದಾಗ ಯಾವುದೇ ಮಾಹಿತಿ ನೀಡದೆ ಸಂಶೋಧನೆ ನಡೆಸುವ ನೆಪದಲ್ಲಿ ಮಗಳಿಗೆ ತೊಂದರೆ ಮಾಡಿದ್ದಾರೆ. ಇದರಿಂದಾಗಿ 1 ವರ್ಷದ ನನ್ನ ಹೆಣ್ಣು ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ ಎಂದು ಹೊಳಲ್ಕೆರೆಯ ಎ. ಗೋಪಾಲ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆರೋಗ್ಯ ಅಧಿಕಾರಿಗಳು, ಪೊಲೀಸರು, ಲೋಕಾಯುಕ್ತ, ಜಿಲ್ಲಾಧಿಕಾರಿ, ಮಾನವ ಹಕ್ಕುಗಳ ಆಯೋಗ ಹೀಗೆ ಹಲವೆಡೆ ಈ ಬಗ್ಗೆ ದೂರು ನೀಡಿದರೂ ನನಗೆ ನ್ಯಾಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನನ್ನ ಮಗಳ ಅನಾರೋಗ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ