ದಾವಣಗೆರೆ, ಜ.8- ಜಿಲ್ಲೆಯಲ್ಲಿ ರೀಜನಲ್ ಪ್ರಾಂತೀಯ ಕಚೇರಿ, ಸಾಫ್ಟ್‌ವೇರ್ ಪಾರ್ಕ್ ಮತ್ತು ಶಾಲಾ ಶಿಕ್ಷಣ ಪ್ರಾಂತೀಯ ಕಚೇರಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನವು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಜಿಲ್ಲೆಯು ಕರ್ನಾಟಕದ ಮಧ್ಯ ಭಾಗದಲ್ಲಿದ್ದು, ಇಲ್ಲಿನ ಪ್ರದೇಶ ಮತ್ತು ಜನರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಹೊಸ ಹೆಜ್ಜೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆ ಮತ್ತು ಜವಳಿ ಪಾರ್ಕ್ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ಒತ್ತಾಯಿಸಿದೆ.
ವಿಮಾನ ನಿಲ್ದಾಣ ಮಂಜೂರಾತಿ, ಬೆಸ್ಕಾಂ ಅನ್ನು ಪ್ರತ್ಯೇಕವಾಗಿ ಮಧ್ಯ ಕರ್ನಾಟಕದ ವಿದ್ಯುತ್ ಕಚೇರಿ ಎಂದು ಸ್ಥಾಪಿಸುವ ಮೂಲಕ ಮಧ್ಯ ಕರ್ನಾಟಕದ ಯುವ ಜನತೆಗೆ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ.
ಈ ವೇಳೆ ಕುರುಬರ ಕೇರಿ ಹೆಚ್. ಜಯಪ್ಪ, ಕೆ.ಎಸ್. ಗಂಗಾಧರ, ವಿ. ಶಿವಮೂರ್ತಿ ಸ್ವಾಮಿ, ಹೆಚ್.ಜಿ. ಸಂಗಪ್ಪ, ಹೆಚ್.ವಿ.ಹಾಲೇಶ್, ಬಿ.ವಿ. ರಾಜಶೇಖರ, ಎಸ್.ಎಂ. ಚರಂತಿಮಠ, ಮಲ್ಲಿಕಾರ್ಜುನ ಕಟ್ಟಿಮನಿ, ಅಕ್ಕಿ ರಾಮಚಂದ್ರ, ಬೂಸ್ಪೂರು ಗುರುಬಸಪ್ಪ, ಎನ್.ಎಂ.ಆಂಜನೇಯ ಗುರೂಜಿ, ಬಾವಿಕಟ್ಟಿ ಜಗದೀಶ್ ಇತರರು ಇದ್ದರು.