ದಾವಣಗೆರೆ, ಜ.8- ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಪ್ರಜಾತಾಂತ್ರಿಕ ಹಕ್ಕನ್ನು ಕಸಿದು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾ ಲಯ ದೊಂದಿಗೆ ಸಂಬಂಧ ಹೊಂದಿರದ, ಕೇವಲ ಲಾಭ, ನಷ್ಟದ ಲೆಕ್ಕಾಚಾರ ಮಾಡಬಲ್ಲ ಉದ್ಯಮಿಗಳು, ಅಧಿಕಾರಿಗಳು ಮತ್ತು ಸರ್ಕಾರದ ‘ಹೌದಪ್ಪ’ಗಳ ಕೈಯ್ಯಲ್ಲಿ ವಿಶ್ವವಿದ್ಯಾ ಲಯದ ಆಡಳಿತವನ್ನು ಒಪ್ಪಿಸುವ ಹುನ್ನಾರ ನಡೆದಿದೆ ಎಂದು ಎಐಡಿಎಸ್ಓ ಆರೋಪಿಸಿದೆ.
ಶಿಕ್ಷಣ ಕ್ಷೇತ್ರದಿಂದ ಹೊರತಾಗಿರುವ ವರನ್ನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಮಾಡುವ ಅಪಾಯಕಾರಿ ನಿಯಮವನ್ನು ಯುಜಿಸಿ ರೂಪಿಸಿದೆ. ಯುಜಿಸಿ ರೂಪಿಸಿರುವ ಹೊಸ ಕರಡು ನಿಯಮಗಳ ಪ್ರಕಾರ ಉದ್ಯಮ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜೊತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರನ್ನು ವಿಶ್ವವಿದ್ಯಾಲಯದ ಕುಲಪತಿ ಯನ್ನಾಗಿ ಮಾಡಬಹುದು ಎಂದು ಹೇಳಲಾಗಿದೆ. ಹೌದಪ್ಪಗಳ ಕೈಯ್ಯಲ್ಲಿ ವಿಶ್ವ ವಿದ್ಯಾಲಯದ ಆಡಳಿತವನ್ನು ಒಪ್ಪಿಸುವ ಈ ಕ್ರಮವನ್ನು ಮತ್ತು ಸರ್ಕಾರದ ಈ ಅಪ್ರಜಾತಾಂತ್ರಿಕ ಮತ್ತು ಕಡು ಶಿಕ್ಷಣ ವಿರೋಧಿ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ.
ಅಲ್ಲದೇ ಎಂ.ಇ ಅಥವಾ ಎಂ.ಟೆಕ್ ನಲ್ಲಿ ಕನಿಷ್ಠ ಶೇಕಡ 55 ಅಂಕ ಪಡೆದವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಿಂದ ವಿನಾ ಯಿತಿ ನೀಡಿ ನೇರವಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡುವ ನಿಯಮವನ್ನು ಕೂಡ ಕರಡಿನಲ್ಲಿ ಸೂಚಿಸಲಾಗಿದೆ. ಯುಜಿಸಿ ಕೂಡಲೇ ಈ ಅಪ್ರಜಾತಾಂತ್ರಿಕ ಕರಡನ್ನು ಹಿಂ ಪಡೆಯಬೇಕು ಮತ್ತು ಪ್ರಾಧ್ಯಾಪಕ ಹುದ್ದೆಯ ಕನಿಷ್ಠ 10 ವರ್ಷಗಳ ಅನುಭವ ಹಾಗೂ ಆಡಳಿತಾತ್ಮಕ ಹುದ್ದೆಯ ಅನುಭವದ ಆಧಾರದ ಈಗಿನ ಮಾನದಂಡವನ್ನೇ ಮುಂದುವ ರಿಸಬೇಕೆಂದು ಎಐಡಿಎಸ್ಓ ಆಗ್ರಹ ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ .ಎಸ್ ತಿಳಿಸಿದ್ದಾರೆ.