ಆರೋಗ್ಯ ಸಚಿವ ರಾಜೀನಾಮೆಗೆ ಸತ್ಯಶೋಧನಾ ಸಮಿತಿ ಆಗ್ರಹ
ದಾವಣಗೆರೆ, ಜ. 7- ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ನಿರ್ಲಕ್ಷ್ಯ ವಹಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸತ್ಯಶೋಧನ ಸಮಿತಿ ಸದಸ್ಯ, ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ತಿಂಗಳಿನಲ್ಲಿ ರಾಜ್ಯದಲ್ಲಿ 600ಕ್ಕೂ ಅಧಿಕ ಬಾಣಂತಿಯರು ಮತ್ತು ಸಾವಿರಕ್ಕೂ ಹೆಚ್ಚು ನವಜಾತ ಶಿಶು ಮರಣ ಹೊಂದಿದ್ದಾರೆ. ಇದಕ್ಕೆ ಆರೋಗ್ಯ ಸಚಿವರ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಆರೋಪಿಸಿದರು.
ಮೃತ ಬಾಣಂತಿಯರಿಗೆ 5 ಲಕ್ಷ ರೂ. ಪರಿಹಾರ ಕೊಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಸಚಿವರು ತಿಳಿಸಿದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು 2 ಸಾವಿರ ನೀಡುವುದಾಗಿ ಹೇಳಿದ್ದಾರೆ. ಇಲ್ಲಿನವರೆಗೆ ಮೃತ ತಾಯಂದಿರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೃತ ಬಾಣಂತಿ ಕುಟುಂಬಕ್ಕೆ 25 ಲಕ್ಷ ರೂ. ನೀಡಬೇಕು. ಮಗುವನ್ನು ದತ್ತು ಪಡೆಯಬೇಕು. ಅದರ ಶಿಕ್ಷಣ ಸೇರಿದಂತೆ ಎಲ್ಲ ಜವಾಬ್ದಾರಿಯನ್ನು ಸರಕಾರ ವಹಿಸಬೇಕು ಎಂದು ಲಮಾಣಿ ಆಗ್ರಹಿಸಿದರು.
ದಾವಣಗೆರೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಭರ್ತಿ ಮಾಡಬೇಕು. ಎರಡೂ ಆಸ್ಪತ್ರೆಗಳಿಗೆ ಇನ್ನಷ್ಟು ಸಿಬ್ಬಂದಿ ನೇಮಿಸಬೇಕಿದೆ. ಹೈ ರಿಸ್ಕ್ ಪ್ರೆಗ್ನೆನ್ಸಿ ಇದ್ದವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಉಲ್ಬಣವಾಗುತ್ತದೆ ಎಂದರು.
ಹೆರಿಗೆ ಆಸ್ಪತ್ರೆಯಲ್ಲಿ ಐಸಿಯು ಅಥವಾ ಕ್ರಿಟಿಕಲ್ ಕೇರ್ ಇದ್ದಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಸರ್ಕಾರವು ಕ್ಲಿಷ್ಟಕರ ಸಮಸ್ಯೆ ಇದ್ದ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದ ಔಷಧಿ ಕಂಪೆನಿಯಿಂದ ಸರಬರಾಜಾದ ಔಷಧಿ ಕಳಪೆ ಎಂದು ಡ್ರಗ್ ಕಂಟ್ರೋಲರ್ ಮಾಹಿತಿ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ.
ದಾವಣಗೆರೆ ಸಿ.ಜಿ. ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಅವರು 21-2-2024ರಂದು ಪಶ್ಚಿಮ ಬಂಗಾಲದಿಂದ ಬಂದ ಆರ್.ಎಲ್.ಸಲೈನ್ ಸರಿ ಇಲ್ಲ ಎಂದು ಪತ್ರ ಬರೆದಿದ್ದರು. ಆದರೂ ಅದನ್ನೇ ಬಳಸಬೇಕೆಂಬ ಧೋರಣೆಯಿಂದ ಸರಕಾರ ನಡೆದುಕೊಂಡಿದೆ.
ಈ ಔಷಧಿಯ ಬಾಟಲಿಯಲ್ಲಿ ಫಂಗಸ್ ಬೆಳವಣಿಗೆ ಕುರಿತು ವೈದ್ಯರು ಶಂಕೆಯನ್ನೂ ವ್ಯಕ್ತಪಡಿಸಿದ್ದರು. ಪಶ್ಚಿಮ ಬಂಗಾಲದ ಈ ಔಷಧಿಯನ್ನು ರಾಜ್ಯದಾದ್ಯಂತ ಜಿಲ್ಲಾ, ತಾಲ್ಲೂಕು ಆಸ್ಪತ್ರೆ, ಪಿಎಚ್‌ಸಿಗಳಿಗೆ ಆಸ್ಪತ್ರೆಗಳಿಗೆ ಪೂರೈಸಲಾಗಿದೆ ಎಂದು ವಿವರಿಸಿದರು.
ಕಳೆದ ವರ್ಷ ಸಿಜಿ ಆಸ್ಪತ್ರೆಯಲ್ಲಿ 21 ಬಾಣಂತಿಯರ ಸಾವಾಗಿದ್ದರೆ, ಈ ಬಾರಿ ಈಗಾಗಲೇ 33 ಸಾವು ಸಂಭವಿಸಿದೆ. ಇನ್ನೂ 4 ತಿಂಗಳು ಬಾಕಿ ಇದೆ. ಇದು ಅತ್ಯಂತ ಕಳವಳಕಾರಿ ಎಂದು ಡಾ. ಚಂದ್ರು ಲಮಾಣಿ ಹೇಳಿದರು.