ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಿದ್ದ
ರಾಣೇಬೆನ್ನೂರು, ಜ. 7 – ಹಾವೇರಿ ಜಿಲ್ಲೆ ಹಿರೇಕೆರೂರಿನ ಪೊಲೀಸ್ ಮೈದಾನದಲ್ಲಿ ಇದೇ ದಿನಾಂಕ 10 ಹಾಗೂ 11 ರಂದು ನಡೆಯುವ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆದಿದ್ದು, ಎರಡೂ ದಿನ ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 10 ರಂದು ಬೆಳಿಗ್ಗೆ 7.30ಕ್ಕೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ ಧ್ವಜಾರೋಹಣ ನಡೆಯಲಿದೆ. ನಂತರ 8.30ಕ್ಕೆ ಜಿ.ಬಿ.ಶಂಕರ್ ರಾವ್ ಸರ್ಕಲ್ನಿಂದ ಹೊರಡುವ ಸಮ್ಮೇಳನದ ಸರ್ವಾಧ್ಯಕ್ಷೆ ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರ ಮೆರವಣಿಗೆಯು 10.30 ಕ್ಕೆ ಸಭಾ ಮಂಟಪಕ್ಕೆ ಬರಲಿದ್ದು, ಪರಿಷತ್ ಅಧ್ಯಕ್ಷ ಮಹೇಶ ಜೋಷಿ ಸಮ್ಮೇಳನ ಉದ್ಘಾಟಿಸುವರು. ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಉಜ್ಜನೇಶ ಬಣಕಾರ, ಮಾಜಿ ಸಚಿವ ಬಿ.ಸಿ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ ಭಾಗವಹಿಸುವರು.
ಬದುಕು ಬರಹದ ಪರಿಚಯ ಗೋಷ್ಠಿ, ನಂತರ `ನಾಡ್ ನುಡಿ ನಾಡವರ್, ಹೊನ್ನ ಬಿತ್ತೇವು ಜಗಕೆಲ್ಲ’ ವಿಷಯ ಕುರಿತು ಗೋಷ್ಠಿ. ಸಂಜೆ 5 ಕ್ಕೆ ವೈವಿಧ್ಯ ವಿಷಯ ಕುರಿತು ಗೋಷ್ಠಿ. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು.
11ರಂದು ಬೆಳಿಗ್ಗೆ ಕವಿಗಳ ಕಲರವ ಕಾವ್ಯ ಗೋಷ್ಠಿ, ಮಾನಿನಿ ಮನದಾಳ ಗೋಷ್ಠಿ, ನಾಡು ನುಡಿಗೆ ಜಿಲ್ಲೆಯ ಕೊಡುಗೆ, ಮಧ್ಯಾಹ್ನ ದಮನಿತರ ಧ್ವನಿ ಗೋಷ್ಠಿ. ನಂತರ ಹಿರೇಕೆರೂರು, ರಟ್ಟಿಹಳ್ಳಿ ತಾಲ್ಲೂಕುಗಳ ವೈಶಿಷ್ಟ್ಯ, ಬಹಿರಂಗ ಅಧಿವೇಶನ, ಸಂಜೆ ಸನ್ಮಾನ ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲಡೆಯಂತೆ ಪುಸ್ತಕ ಮಾರಾಟ ಹಾಗೂ ಪ್ರದರ್ಶನ ಇದೆ. ಎರಡು ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ.
45 ಲಕ್ಷ ರೂ. ಸಂಗ್ರಹ: ಹಾವೇರಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಭೂ ಬಾಡಿಗೆಗೆ ಪಡೆದಿದ್ದು, ಅಲ್ಲಿ ಸಾಹಿತ್ಯ ಭವನದ ಕಟ್ಟಡ ಕಟ್ಟಲು ಸರ್ಕಾರ ಅನುದಾನ ಕೊಡಲು ನಿರಾಕರಿಸಿದ್ದರಿಂದ ಪರಿಷತ್ನ ಸ್ವಂತ ಜಾಗೆಯಲ್ಲಿ ಭವನ ನಿರ್ಮಿಸಿ, ಮಾರ್ಚ್ ತಿಂಗಳಿನಲ್ಲಿ ಉದ್ಘಾಟನೆ ಮಾಡುವ ಇರಾದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನದ್ದಾಗಿದೆ. ಭವನ ನಿರ್ಮಾಣಕ್ಕೆ ಈಗಾಗಲೇ ಶಾಸಕರು ಸೇರಿದಂತೆ ಸಾರ್ವಜನಿಕರಿಂದ 45 ಲಕ್ಷ ಹಣ ಸಂಗ್ರಹಿಸಲಾಗಿದೆ.