ದಾವಣಗೆರೆ, ಜ. 5- ಸೌಹಾರ್ದ ಪ್ರಕಾಶನದ ವತಿಯಿಂದ ಶಿಕ್ಷಕರಾಗಿದ್ದ ದಿ. ಎಂ.ಬಿ. ಶಂಕರ ಮೂರ್ತಿ ಅವರ 9 ನೇ ವರ್ಷದ ಪುಣ್ಯ ಸ್ಮರಣಾರ್ಥ ನಾಳೆ ದಿನಾಂಕ 6 ಮತ್ತು 7 ರಂದು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ ವಿಷಯಾಧಾರಿತ ಕಾರ್ಯಾಗಾರ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೌಹಾರ್ದ ಪ್ರಕಾಶನದ ಪ್ರಕಾಶಕರಾದ ಎ.ಸಿ.ಶಶಿಕಲಾ ಶಂಕರಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 7 ರಂದು ಮಧ್ಯಾಹ್ನ 2.45 ಕ್ಕೆ ಏರ್ಪಡಿಸಲಾಗಿದೆ. ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪ್ರೊ.ವೈ.ಎಂ. ವಿಠಲರಾವ್ ಉದ್ಘಾಟಿಸಲಿದ್ದಾರೆ.
ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಗೌರವಾಧ್ಯಕ್ಷರಾಗಿ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಎಂ.ಎಂ.ಪಟ್ಟಣಶೆಟ್ಟಿ ಆಗಮಿಸಲಿದ್ದಾರೆ. ದೊಡ್ಡ ಬಳ್ಳಾಪುರದ ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ `ವಿಜ್ಞಾನವನ್ನು ನಂಬಿ; ಆದರೆ ಮೌಢ್ಯತೆಗೆ ಬಲಿಯಾಗಬೇಡಿ’ ಕುರಿತು ವಿಶ್ಲೇಷಣೆ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಲಿದ್ದಾರೆ. ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಹೆಚ್.ವಿ. ವಾಮದೇವಪ್ಪ, ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.
ರೇಖಾ ಪುರಾಣಿಕ್, ಕುಸುಮಾ ಲೋಕೇಶ್ ಮಾತನಾಡಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಲಿಗ್ರಾಮ ಗಣೇಶ್ ಶೆಣೈ, ಕುಸುಮಾ ಲೋಕೇಶ್, ಕೆ.ಸಿ.ಉಮೇಶ, ವಾಸಂತಿ ಮಂಜುನಾಥ್, ಜ್ಯೋತಿ ಗಣೇಶ್ ಶೆಣೈ ಉಪಸ್ಥಿತರಿದ್ದರು.