ದಾವಣಗೆರೆ, ಜ.5- ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ನಿಶ್ಚಿತ ಗೌರವ ಧನ ನೀಡಬೇಕೆಂಬುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಾಡಿದ್ದು ದಿನಾಂಕ 7 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಷಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್ ಕುಕ್ಕುವಾಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಶಾ ಕಾರ್ಯಕರ್ತೆಯರು ಹಗಲಿರುಳು ಬಡಜನರಿಗೆ ಆರೋಗ್ಯ ಸೇವೆ ಸಲ್ಲಿಸುತ್ತಾ ಆರೋಗ್ಯ ಇಲಾಖೆಯಲ್ಲಿ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಇರುವ ಗೌರವ ಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ಒಟ್ಟು 15 ಸಾವಿರ ರೂ. ಮಾಸಿಕ ಗೌರವ ಧನ ನಿಗದಿ ಮಾಡಬೇಕು.
ಮೊಬೈಲ್ ಡಾಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹ ಧನ ನಿಗದಿ ಮಾಡಬೇಕು. ಕಾರ್ಯಕರ್ತೆ ಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್, ಇಎಸ್‌ಐ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಿಪ್ಪೇಸ್ವಾಮಿ, ನಾಗವೇಣಿ, ಪರ್ವಿನ್ ಬಾನು, ಬಿ. ಹಾಲಮ್ಮ, ಕರಿಬಸಮ್ಮ , ಇಂದಿರಾ, ಹಳದಮ್ಮ ಮತ್ತಿತರರಿದ್ದರು.