ದಾವಣಗೆರೆ, ಜ.5- ಭಾರತೀಯ ರೈತ ಒಕ್ಕೂಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಡಿಎಸ್‌ಎಸ್ ಸೇರಿದಂತೆ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮಳೆಗಾಲದಲ್ಲಿ ಮಾತ್ರ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಬೇಕು. ಆದರೆ ವಾಣಿ ವಿಲಾಸ ಸಾಗರ ಭರ್ತಿಯಾಗಿ ಕೋಡಿ ಬಿದ್ದಿದ್ದರೂ, ಇನ್ನೂ ಪ್ರತಿನಿತ್ಯ 700 ಕ್ಯೂಸೆಕ್ಸ್ ನೀರು ಬಿಡುತ್ತಿದ್ದು, ಕೂಡಲೇ ಸ್ಥಗಿತಗೊಳಿಸ ಬೇಕೆಂದು ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಿಎಂಗೆ ಮನವಿ ಸಲ್ಲಿಸಿದರು. ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾ ಯಿಸಿ ಡಿಎಸ್‌ಎಸ್, ದಲಿತ ಮುಖಂಡರು ಸಿಎಂಗೆ ಮನವಿ ಸಲ್ಲಿಸಿದರು. ಹೀಗೆ ಸಾರ್ವಜನಿಕರಿಂದ ಸಾಕಷ್ಟು ಮನವಿಗಳು ಸಿಎಂಗೆ ಸಲ್ಲಿಕೆಯಾದವು.