ಯುವ ಜನೋತ್ಸವದಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ

ಕರವೇ ಆರೋಪ

ದಾವಣಗೆರೆ, ಜ. 6- ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯುವ ಜನೋತ್ಸವದಲ್ಲಿ ಕಥೆ ಹಾಗೂ ಕವನ ಬರೆಯುವ ಸ್ಪರ್ಧೆ ಕೇವಲ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾಡಲಾಗಿದೆ. ಕನ್ನಡ ಭಾಷೆಗೆ ಆದ್ಯತೆ ನೀಡಿಲ್ಲ. ದೆಹಲಿಗೆ ಆಯ್ಕೆಯಾದರೆ ಕನ್ನಡ ಭಾಷೆ ಸ್ಪರ್ಧೆ ಇರುವುದಿಲ್ಲ ಎನ್ನಲಾಗಿದೆ. ಆದ್ದರಿಂದ ಈ ಕುರಿತು ಸಂಸತ್ ಅಧಿವೇಶನದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು, ನಿನ್ನೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಥೆ ಮತ್ತು ಕವನಗಳನ್ನು ಹಿಂದಿಯಲ್ಲಿ ಬರೆಯಲು ಕೊಡಲಾಗಿತ್ತು. ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಅವರು ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದವರಿಗೆ ಬಹುಮಾನ ನೀಡುತ್ತೇವೆ. ಆದರೆ ದೆಹಲಿಯಲ್ಲಿ ಬರೆಯುವ ಮುಖ್ಯ ಸ್ಪರ್ಧೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆಂದರು.

ಇದಕ್ಕೆ ನಮ್ಮ ವಿರೋಧವಿದೆ. ರಾಜ್ಯದಲ್ಲಿರುವ ಕೇಂದ್ರ ಸರ್ಕಾರಕ್ಕೆ ಒಳಪಟ್ಟಿರುವ ಎಲ್ಲಾ ಇಲಾಖೆಗಳು ತ್ರಿಭಾಷಾ ಸೂತ್ರ ಅನುಸರಿಸುತ್ತಿವೆ ಎಂದು ಬೊಬ್ಬೆ ಹೊಡೆಯುತ್ತದೆ. ಆದರೆ ದೆಹಲಿಯಲ್ಲಿ ಮಾತ್ರ ಯಾವ ಸೂತ್ರವೂ ಇಲ್ಲ. ಹಿಂದಿ ಮತ್ತು ಇಂಗ್ಲಿಷ್ ಅನ್ನೋದಾದರೆ ನಮ್ಮ ರಾಜ್ಯದಲ್ಲಿ ಹಿಂದಿಯನ್ನು ಹೇಗೆ ನಾವು ಒಪ್ಪಿಕೊಳ್ಳಬೇಕು? ಎಂದು ಪ್ರಶ್ನಿಸಿದರು.

ದೆಹಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡದಲ್ಲಿ ಪರೀಕ್ಷೆ ಬರೆದು ಗೆದ್ದು ಬಂದರೆ ಕರ್ನಾಟಕಕ್ಕೆ ಮತ್ತೊಂದು ಗರಿ ಬರುತ್ತದೆ. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತೆ ಇಂತಹ ಕನ್ನಡ ದ್ರೋಹದ ಕೆಲಸ ಮಾಡಿದೆ. ಈ ಕುರಿತು ಸಂಸದರು ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಇದರ ಬಗ್ಗೆ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಮಾನ್ಯತೆ ಸಿಗುವಂತೆ ಒತ್ತಡ ತಂದು ಕನ್ನಡದಲ್ಲಿ ಸ್ಪರ್ಧೆಯನ್ನು ಮಾಡಬೇಕೆಂದರು.

ಸಂಸದರು ದಾವಣಗೆರೆಯನ್ನು ಐಟಿ-ಬಿಟಿ ಹಬ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರ ಬಗ್ಗೆಯೂ ಸಹ ಗಮನಹರಿಸಿ ದಾವಣಗೆರೆ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಸದರು ಮುಂದಾಗಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ ವಾಸುದೇವ ರಾಯ್ಕರ್, ಜಬೀವುಲ್ಲಾ, ಈಶ್ವರ್, ಗಿರೀಶ್‌, ಖಾದರ್ ಬಾಷಾ, ಸಂತೋಷ್, ಮಂಜುಳಾ, ತನ್ವೀರ್, ಮಹಾಂತೇಶ್, ರಫೀಕ್ ಉಪಸ್ಥಿತರಿದ್ದರು.  

error: Content is protected !!