ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳ ಕಡೆಗಣನೆ

ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಆಕ್ರೋಶ

ದಾವಣಗೆರೆ, ಜ. 6- ಇದೇ ದಿನಾಂಕ 11 ಮತ್ತು 12 ರಂದು ಜಗಳೂರಿನಲ್ಲಿ ನಡೆಯಲಿರುವ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಎಲ್ಲಾ ಸಾಹಿತ್ಯಿಕ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ. ಕೆಲವರ ಸ್ವಹಿತಾಸಕ್ತಿಗಾಗಿ ಈ ಸಮ್ಮೇಳನ ಎಂಬುದು ಎದ್ದು ಕಾಣುತ್ತದೆ ಎಂದು ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ನಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಅಪಾಯಕಾರಿ ಯಾದದ್ದು, ಹೀಗಾಗಿ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸುವ ಮೂಲಕ ಸಮ್ಮೇಳನವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಅಸಮ ರ್ಥರೊಬ್ಬರು ಅಧ್ಯಕ್ಷರಾದರೆ ಏನಾಗಬೇಕೋ, ಅವರ ಅಸಮರ್ಥತೆಗೆ ಪೂರಕವಾಗಿ ರಾಜಕೀಯ ಪುಢಾರಿತನ ಮೇಲಗೈ ಪಡೆದುಕೊಂಡಿದೆ. ಇದು ಖಂಡಿತವಾಗಿಯೂ ಸಾಹಿತ್ಯ ಸಮಾವೇಶವಾಗು ವುದಿಲ್ಲ ಎಂಬುದು ಈಗಾಗಲೇ ಆಹ್ವಾನ ಪತ್ರಿಕೆಯ ಮೂಲಕವಾಗಿ ಬಿಂಬಿತವಾಗಿದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಮತ್ತು  ಸಮ್ಮೇಳನ ನಡೆಯುತ್ತಿರುವ ಜಗಳೂರು ನೆಲದಲ್ಲಿಯೇ ಪ್ರತಿಭಾನ್ವಿತ ಹೆಸರಾಂತ ಬರಹಗಾರರು, ಕವಿಗಳು, ಲೇಖಕರು ಇದ್ದರೂ ಸಹ ಅವರನ್ನು ಸಭೆಗಳಿಂದ, ಗೋಷ್ಠಿಗಳಿಂದ ದೂರ ಇರಿಸಲಾಗಿದೆ.ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಬಗ್ಗೆ ನಮ್ಮದೇನು ತಕರಾರು ಇಲ್ಲ. ಈ ಹಿಂದಿನ ಬಹುತೇಕ ಸಮ್ಮೇಳನಗಳಲ್ಲಿ ಯಾವ ತಾಲ್ಲೂಕಿನಲ್ಲಿ ಸಮ್ಮೇಳನ ನಡೆಯುತ್ತಿದೆಯೋ ಅದೇ ತಾಲ್ಲೂಕಿನವರನ್ನು  ಸರ್ವಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಸರಳವಾಗಿತ್ತು. 

ಅಲ್ಲಿಯ ಶಾಸಕ ಬಿ. ದೇವೇಂದ್ರಪ್ಪ ಅವರೇ ಮುಂಚೂಣಿಯಲ್ಲಿ ನಿಂತು ವಿಶೇಷ ಜವಾಬ್ದಾರಿಯನ್ನು ವಹಿಸಿಕೊಂಡು ಲಕ್ಷ ಲಕ್ಷ ಹಣ ವೆಚ್ಚ ಮಾಡಿ ಸಮ್ಮೇಳನದ ಜೊತೆಗೆ ಜಲೋತ್ಸವ ಪೋಣಿಸಿ ಮಾಡುತ್ತಿರುವ ಈ ಜಾತ್ರೆಯಲ್ಲಿ ತಾಲ್ಲೂಕಿನ ಸ್ವಾಭಿಮಾನವನ್ನು ಜಾಣ್ಮೆಯಿಂದ ಮರೆತದ್ದು ಮಾತ್ರ ಖಂಡನೀಯ ಎಂದರು.

ಜಿಲ್ಲೆಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹೆಸರು ಮಾಡಿದ ಹಿರಿಯ ಸಾಹಿತಿಗಳು, ಲೇಖಕರು, ವಿಮರ್ಶಕರು, ಅಂಕಣಕಾರರನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯಿಸಿ ಅನ್ಯ ಜಿಲ್ಲೆಯವರಿಗೆ ಮಣೆ ಹಾಕಲಾಗಿದೆ. ತಮಗೆ ಬೇಕಾ ದವರನ್ನು ಎರಡೆರಡು ಕಡೆಯಲ್ಲಿ ಅವಕಾಶವನ್ನು ಕೊಟ್ಟು ಮೂರ್ಖತನ ಮೆರೆದಿದ್ದಾರೆ. ಕಸಾಪ ಜಿಲ್ಲಾ ಸಾರಥ್ಯ ವಹಿಸಿಕೊಡು ದುಡಿದ ಕೆಲ ಹಿರಿಯರನ್ನು ಮರೆತಿದ್ದಾರೆ. ಗೆಳೆತನ -ಗುರುತನ -ಜಾತಿತನಗಳು ಮುಪ್ಪರಿಗೊಂಡ ಅಂತರ್ ಜಿಲ್ಲಾ ಸಮ್ಮೇಳನ ಇದಾಗಿದೆ ಎಂದು ಟೀಕಿಸಿದರು.

ಜಾನಪದ ಸಾಹಿತ್ಯ ಕಣಜದ ಆಗರವಾಗಿರುವ ಜಗಳೂರು ತಾಲ್ಲೂಕಿನಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರೊಂದಿಗೆ ಎಲೆ ಮರೆಯ ಕಾಯಿಯಂತಿರುವ ಜಾನಪದ ಕಥೆಗಾರರು, ಕಥೆಗಾರ್ತಿಯರು, ಹಾಡುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿರುವುದು ಒಂದು ಸಾಂಸ್ಕೃತಿಕ ಪರಂಪರೆಗೆ ಮಾಡಿರುವ ಬಹುದೊಡ್ಡ ಅವಮಾನವಾಗಿದೆ. ಇದು ಅಧ್ಯಕ್ಷರಾದಿಯಾಗಿಯೂ ಕಾರ್ಯಕಾರಿ ಸಮಿತಿಯ ದಿವ್ಯ ನಿರ್ಲಕ್ಷ್ಯದ ಧ್ಯೋತಕವಾಗಿದೆ ಎಂದು ಹೇಳಿದರು.

ವಿವಿಧ ಸಮಿತಿಗಳ ಪೂರ್ವಭಾವಿ ಸಭೆಗಳನ್ನು ಪಾರದರ್ಶಕವಾಗಿ ನಡೆಸಿರುವುದಿಲ್ಲ. ಕಸಾಪ ಸ್ಥಳೀಯ ಆಜೀವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯಿಸಲಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಂ. ಬಸವಪ್ಪ, ಸಂಗೇನಹಳ್ಳಿ ಅಶೋಕ್ ಕುಮಾರ್, ಜಿ.ಎಸ್‌. ಸುಭಾಶ್ಚಂದ್ರ ಬೋಸ್, ಪ್ರೊ. ಜೆ. ಯಾದವ ರೆಡ್ಡಿ, ಎ.ಕೆ. ಚೌಡಪ್ಪ, ಅಣಬೂರು ಮಠದ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!