ದಾವಣಗೆರೆ, ಜ. 3- ನಗರದ ಬಾಪೂಜಿ ಹೈಸ್ಕೂಲ್ ಹಿರಿಯ ವಿದ್ಯಾರ್ಥಿಗಳ ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ಕಳೆದ ವರ್ಷದಿಂದ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿ ಕಂದನಕೋವಿ ಸರ್ಕಾರಿ ಶಾಲೆ ನವೀಕರಣ ಹಾಗೂ ಆರೋಗ್ಯ ಶಿಬಿರವನ್ನು ನಾಳೆ ದಿನಾಂಕ 4 ರ ಶನಿವಾರ ಬೆಳಿಗ್ಗೆ 10 ಕ್ಕೆ ಹಮ್ಮಿಕೊಳ್ಳುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಟಿ. ವೀರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಾಪೂಜಿ ಹೈಸ್ಕೂಲ್‌ನ 1988 ರಿಂದ 2001 ರವರೆಗಿನ 14 ವರ್ಷಗಳ ವಿದ್ಯಾರ್ಥಿಗಳು 2022 ನೇ ವರ್ಷ `ಸ್ನೇಹ ಸಮ್ಮಿಲನ’ ದಲ್ಲಿ ಒಗ್ಗೂಡಿ ಅಭೂತಪೂರ್ವ ಕಾರ್ಯಕ್ರಮ ನಡೆಸಿದ್ದು ಜನಜನಿತವಾಗಿತ್ತು. ಈ ಸ್ನೇಹಬಂಧ ಮುಂದುವರೆದು ಸಮಾಜಮುಖಿ ಕಾರ್ಯಕ್ರಮ ನಡೆಸುವ ಸದುದ್ದೇಶದಿಂದ ಬಾಪೂಜಿ ಹೈಸ್ಕೂಲ್ ಅಲ್ಯುಮ್ನಿ ಸಂಘವನ್ನು ನೋಂದಣಿ ಮಾಡಿಸಲಾಯಿತು ಎಂದರು.
ಮಾಜಿ ಮೇಯರ್ ಎಸ್.ಟಿ.ವೀರೇಶ್ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರೊಡಗೂಡಿ ಕಳೆದ ವರ್ಷ ಶಾಮನೂರಿನ ಜನತಾ ಕಾಲೋನಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯನ್ನು ನವೀಕರಿಸಿ, ಪೀಠೋಪಕರಣಗಳನ್ನು ನೀಡಿ ತಮ್ಮ ಶಿಕ್ಷಣ ಪ್ರೇಮವನ್ನು ವ್ಯಕ್ತಪಡಿಸಿದ್ದರು.
ಜೊತೆಗೆ ಡಾಲರ್ಸ್ ಕಾಲೋನಿಯ ಉದ್ಯಾನವನದ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಇದೀಗ ಮಾಯಕೊಂಡ ಕ್ಷೇತ್ರದ ಕಂದನಕೋವಿ ಗ್ರಾಮ ಪ್ರೌಢಶಾಲೆಗೆ ಸುಣ್ಣ ಬಣ್ಣ ಬಳಿಸಿ, ಗೋಡೆ ಚಿತ್ರಗಳನ್ನು ಬರೆಸಿ ಶಾಲಾ ಕಟ್ಟಡ ಸುಂದರಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಳೆ ದಿನಾಂಕ 4 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನವೀಕರಣಗೊಂಡ ಶಾಲೆಯ ಉದ್ಘಾಟನೆ ಮತ್ತು ಸ್ನೇಹ ಸಮ್ಮಿಲನ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಜಿ. ಕೊಟ್ರೇಶ್, ಎಸ್. ಗೀತಾ, ಗ್ರಾ.ಪಂ. ಅಧ್ಯಕ್ಷೆ ಭಾರತಮ್ಮ ಮಹೇಶ್ವರಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ, ಕಂದನಕೋವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಸ್.ಟಿ. ಸವಿತಾ ಭಾಗವಹಿಸಲಿದ್ದಾರೆ.
ಬಾಪೂಜಿ ಹೈಸ್ಕೂಲ್‌ನಲ್ಲಿ ಕಲಿತ ವಿದ್ಯಾ ರ್ಥಿಗಳು ಒಟ್ಟುಗೂಡಿ ಐದು ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಿಸಲಾ ಗಿದೆ. ಗ್ರಾಮಸ್ಥರಿಗಾಗಿ ಅಂದು ಎಸ್ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾ ಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಾಪೂಜಿ ಅಲ್ಯುಮ್ನಿ ಪದಾಧಿಕಾರಿಗಲಾದ ಕಿರುವಾಡಿ ವೀರೇಶ್, ಸಿದ್ಧಗಂಗಾ ಹೇಮಂತ್, ಸಂಜಯ್ ರೇವಣಕರ್, ಸುಭಾಷಿಣಿ, ಐನಳ್ಳಿ ಶುಭಾ, ಹೊನ್ನೂರು ಗಿರೀಶ್, ಬಿ.ಜೆ. ಅಭಿಷೇಕ್, ಗುರು ರೇವಣಕರ್, ಎಂ.ಸಿ. ಶ್ರೀನಿವಾಸ್, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.