ಬೆಂಗಳೂರು, ಜ. 3- ಸ್ಮಾರ್ಟ್ ಸಿಟಿ ಅಭಿಯಾನದಡಿ ಬೆಂಗಳೂರು ಹೊರತುಪಡಿಸಿ 6 ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಖಾತೆ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ.
ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಅಭಿಯಾನ ಪ್ರಾರಂಭದಿಂದ ಇದುವರೆಗೆ 7 ನಗರಗಳಲ್ಲಿ 6415.51 ಕೋಟಿ ರೂ. ಕಾಮಗಾರಿಗಳು ನಡೆದಿವೆ, ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲದ ಕಾರಣ ಸಮಿತಿ ರಚಿಸಿ, ತನಿಖೆ ನಡೆಸಿ 3 ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50ರ ಅನುಪಾತದ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಂ ಡಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ, ಬಹುತೇಕ ರಸ್ತೆ ನಿರ್ಮಾಣ, ಒಳಚರಂಡಿ, ಉದ್ಯಾನ ವನಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗೆ ಮಾಡಿರುವ ಅನುದಾನ ವೆಚ್ಚ ಬೇಸರ ತಂದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲು ಅನುದಾನವನ್ನು ಸ್ಮಾರ್ಟ್ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್ ನಿಲ್ದಾಣ ಸೇರಿದಂತೆ, ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ವೆಚ್ಚ ಮಾಡಬೇಕಾಗಿತ್ತು.
ಸ್ಮಾರ್ಟ್ ಸಿಟಿ ಅಭಿಯಾನ ಕಾಮಗಾರಿಗಳು ಸರ್ಕಾರದ ಆಸ್ತಿಗಳನ್ನು ವೃದ್ಧಿಸುವಂತೆ ಇರಬೇಕೇ ಹೊರತು ರಸ್ತೆ ನಿರ್ಮಾಣ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಸಿರುವುದು ಸೂಕ್ತವಲ್ಲ ಎಂದರು. ಪ್ರತಿ ಸ್ಮಾರ್ಟ್ ಸಿಟಿಗೆ ಅಂದಾಜು 990 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ, ಇದರಲ್ಲಿ ಶೈಕ್ಷಣಿಕ ವಲಯಕ್ಕೆ ಶೇ.2, ಇಂಧನ ಶೇ.8, ಆರೋಗ್ಯ ಶೇ.2, ಮಾಹಿತಿ ತಂತ್ರಜ್ಞಾನ ವಲಯಕ್ಕೆ ಶೇ.8, ಒಟ್ಟಾರೆ ಶೇ.20ರಷ್ಟು, ಕೆರೆ ಮತ್ತು ಉದ್ಯಾನವನಕ್ಕೆ ಶೇ.9, ಮಾರುಕಟ್ಟೆಗೆ ಶೇ.5, ರಸ್ತೆ ನಿರ್ಮಾಣಕ್ಕೆ ಶೇ.36, ಕ್ರೀಡಾ ವಲಯಕ್ಕೆ ಶೇ.5, ಸಾರಿಗೆ ವ್ಯವಸ್ಥೆಗೆ ಶೇ.8 ಹಾಗೂ ಇತರೆ ಮೂಲಭೂತ ಸೌಕರ್ಯಗಳ ವೃದ್ಧಿಗೆ ಶೇ.18ರಷ್ಟು ಅನುದಾನ ಹಂಚಿಕೆಯಾಗಿದೆ.
ಈ ವಲಯಗಳ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆಯಾದರೂ ಕೆಲವು ಸಮರ್ಪಕ ವಾಗಿಲ್ಲದ ಕಾರಣ ತನಿಖೆಗೆ ಒಳಪಡಿಸಬೇಕಾಗಿದೆ ಎಂದರು. ಮಾರ್ಚ್ 2025ರ ಅಂತ್ಯಕ್ಕೆ ಸ್ಮಾರ್ಟ್ ಸಿಟಿ ಅಭಿಯಾನ ಮುಗಿಯಲಿದ್ದು, ಬರಬೇಕಿರುವ ಉಳಿಕೆ ಮೊತ್ತ ಹಾಗೂ ಹಾಲಿ ಉಳಿದಿರುವ ಮೊತ್ತದಲ್ಲಿ ಆಧುನಿಕ ತಂತ್ರಜ್ಞಾನದ ಅಂತರ್ ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಶಾಲೆಗಳ ನಿರ್ಮಾಣಕ್ಕೆ ವಿನಿಯೋಗಿಸಬೇಕು.
ಇದರಿಂದ ಬಡ ಮಕ್ಕಳೂ ಕಲಿಕೆಯಲ್ಲಿ ಮುಂದುವರೆಯಬೇಕು, ಅತ್ಯಾಧುನಿಕ ಕಲಿಕಾ ಸಾಮಗ್ರಿಗಳು ಸ್ಮಾರ್ಟ್ ಶಾಲೆಗಳಲ್ಲಿ ಲಭ್ಯವಾಗಬೇಕು ಎಂದರು.