ಹುಬ್ಬಳ್ಳಿಯ ಚಿನ್ಮಯ ಮಿಷನ್ ನ ಸ್ವಾಮಿ ಕೃತಾತ್ಮಾನಂದ ಜೀ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ಸಾಹಿತಿ ಅಶೋಕ ಹಂಚಲಿ ಮುಖ್ಯ ಅತಿಥಿ
ಸಾಮಾಜಿಕ ಕಾರ್ಯಕರ್ತರಾದ ಕು. ಹಾರಿಕಾ ಮಂಜುನಾಥ್ ವಿಶೇಷ ಉಪನ್ಯಾಸ
ಗಾಯಕಿ ಎಂ.ಡಿ. ಪಲ್ಲವಿ, ನಟ ರಮೇಶ್ ಅರವಿಂದ್ ಅವರಿಂದ ಹೃದಯ ಸ್ಪರ್ಶಿ ಸಂಜೆ ಕಾರ್ಯಕ್ರಮ
ದಾವಣಗೆರೆ, ಜ. 1- ನಗರದ ಶ್ರೀ ಸೋಮೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ನಾಡಿದ್ದು ದಿನಾಂಕ 3, 4 ಹಾಗೂ 5 ರಂದು ಮೂರು ದಿನಗಳ ಕಾಲ `ಶ್ರೀ ಸೋಮೇಶ್ವರೋತ್ಸವ-2025′ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಪ್ರಭಾವತಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾಡಿದ್ದು ದಿನಾಂಕ 3 ರ ಶುಕ್ರವಾರ ಸಂಜೆ 5.45 ಕ್ಕೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯ ವನ್ನು ಹುಬ್ಬಳ್ಳಿಯ ಚಿನ್ಮಯ ಮಿಷನ್ ನ ಸ್ವಾಮಿ ಕೃತಾತ್ಮಾನಂದ ಜೀ ವಹಿಸಲಿದ್ದು, ಸಾಹಿತಿ ಅಶೋಕ ಹಂಚಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಅರುಣಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.
ಇದೇ ವೇಳೆ ನಿವೃತ್ತ ಶಿಕ್ಷಕ ಮಹಾಲಿಂಗಪ್ಪ ಯಾದವ್, ಫಿಜಿಯೋಥೆರಪಿಸ್ಟ್ ಡಾ. ಬಸವರಾಜ ಶಿವಪೂಜಿ ಅವರಿಗೆ `ಸೋಮೇಶ್ವರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ದಿನಾಂಕ 4 ರ ಶನಿವಾರ ಸಂಜೆ 5.45ಕ್ಕೆ ನಡೆಯುವ ಸಮಾರಂಭದಲ್ಲಿ ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಆಗಮಿಸಲಿದ್ದಾರೆ.
`ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಕುಟುಂಬದ ಪಾತ್ರ’ ವಿಷಯ ಕುರಿತು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಕು. ಹಾರಿಕಾ ಮಂಜುನಾಥ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ರಾಷ್ಟ್ರೀಯ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಅವರಿಗೆ `ಸೋಮೇಶ್ವರ ಸಿರಿ’ ಪ್ರಶಸ್ತಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ ರಾಜ್ಯ ಪಠ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ವೈ.ಎಂ. ಸೃಜನ, ಕೇಂದ್ರ ಪಠ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಹೆಚ್.ಎಂ.ಪವನ್ ಅವರಿಗೆ `ಸೋಮೇಶ್ವರ ಸಾಧನಾ ಸಿರಿ’ ಪುರಸ್ಕಾರ ಮತ್ತು 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.
ದಿನಾಂಕ 5 ರ ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಡಿಡಿಪಿಐ ಜಿ. ಕೊಟ್ರೇಶ್, ಉದ್ಯಮಿ ಬಿ.ಸಿ.ಉಮಾಪತಿ, ವೈದ್ಯ ಡಾ. ಅಂದನೂರು ರುದ್ರಮುನಿ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ನಿವೃತ್ತ ಶಿಕ್ಷಕ ಮಳಲಕೆರೆ ಗುರುಮೂರ್ತಿ ಅವರಿಗೆ `ಸೋಮೇಶ್ವರ ಶಿಕ್ಷಣ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ಪತ್ರಕರ್ತರಾದ ರಮೇಶ್ ಜಹಗೀರ್ ದಾರ್, ದೇವಿಕಾ ಸುನೀಲ್ ಅವರಿಗೆ `ಸೋಮೇಶ್ವರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅಂದು ಸಂಜೆ ಗಾಯಕಿ ಎಂ.ಡಿ. ಪಲ್ಲವಿ, ನಟ ರಮೇಶ್ ಅರವಿಂದ್ ಅವರಿಂದ ಹೃದಯ ಸ್ಪರ್ಶಿ ಸಂಜೆ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಸಿ.ಎನ್. ಪರಮೇಶ್ವರಪ್ಪ, ಕೆ. ಗಾಯತ್ರಿ, ಎನ್.ಆರ್. ಹರೀಶ್ ಬಾಬು ಉಪಸ್ಥಿತರಿದ್ದರು.