ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ಕುರಿತ ರಾಷ್ಟ್ರೀಯ ತರಬೇತುದಾರ ಡಾ. ವಿ.ಎಲ್.ಎಸ್. ಕುಮಾರ್ ಎಚ್ಚರಿಕೆ
ದಾವಣಗೆರೆ, ಡಿ. 29 – ಅಪಘಾತದಲ್ಲಿ ಗಾಯಗೊಂಡು ಇಲ್ಲವೇ ಯಾವುದೇ ತುರ್ತು ಪರಿಸ್ಥಿತಿಗೆ ಸಿಲುಕಿದ ವ್ಯಕ್ತಿಗೆ ನೀರು ಕುಡಿಸುವುದೇ ಪ್ರಥಮ ಚಿಕಿತ್ಸೆಯಲ್ಲ. ಹೀಗೆ ನೀರು ಕುಡಿಸುವುದು ಗಾಯಾಳುವಿನ ಅಥವಾ ಸಂತ್ರಸ್ತರ ಪ್ರಾಣಕ್ಕೆ ಮುಳುವಾಗಬಹುದು ಎಂದು ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ಕುರಿತ ರಾಷ್ಟ್ರೀಯ ತರಬೇತುದಾರ ಡಾ. ವಿ.ಎಲ್.ಎಸ್. ಕುಮಾರ್ ಎಚ್ಚರಿಕೆ ನೀಡಿದರು.
ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಸಭಾಂಗಣದಲ್ಲಿ ಕೆಎಸ್ಸಾರ್ಟಿಸಿ ಮತ್ತು ಭಾರತೀಯ ರೆಡ್‌ಕ್ರಾಸ್ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಕಾರ್ಯಾಗಾರದಲ್ಲಿ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಉದ್ದೇಶಿಸಿ ಮಾತನಾಡಿದರು.
ಪ್ರಥಮ ಚಿಕಿತ್ಸೆ ಕುರಿತಂತೆ ಸಾರ್ವಜನಿಕರಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಗಾಯಾಳುವಿಗೆ ನೀರು ಕುಡಿಸುವುದು, ಕೈಕಾಲುಗಳನ್ನು ಉಜ್ಜುವುದು ಪ್ರಥಮ ಚಿಕಿತ್ಸೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ದುರ್ಘಟನೆ ನಡೆದ ಮೊದಲ 10 ನಿಮಿಷವು ಗಾಯಾಳು ಪಾಲಿನ ಪ್ರಮುಖ ಅವಧಿಯಾಗಿ ರುತ್ತದೆ. ಪ್ರಥಮ ಚಿಕಿತ್ಸೆ ವಿಷಯದಲ್ಲಿ ಈ ಅವಧಿಯನ್ನು ಪ್ಲಾಟಿನಂ ಟೈಮ್ ಎಂದು ಕರೆಯುತ್ತೇವೆ. ಅಪಘಾತವಾ ದಾಗ ಹೃದಯಾಘಾತವಾದರೆ ಇಲ್ಲವೇ ಬೆಂಕಿ ಅವಘಡ ದಲ್ಲಿ ಹೊಗೆ ಕುಡಿದು ಅಸ್ವಸ್ಥರಾದವರು ಪ್ರಜ್ಞೆ ತಪ್ಪಿರು ತ್ತಾರೆ. ಮೊದಲ 10 ನಿಮಿಷದವರೆಗೆ ಅವರ ಮೆದುಳು ಕ್ರಿಯಾಶೀಲವಾಗಿರುತ್ತದೆ. ಈ 10 ನಿಮಷದ ಒಳಗಾಗಿ ಸಿಪಿಆರ್ ಪ್ರಕಿಯೆ ನಡೆಸಿದರೆ, ಗಾಯಾಳು ಬದುಕುಳಿ ಯುವ ಸಾಧ್ಯತೆ ಶೇ. 80ರಷ್ಟಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಕಡೆ ಗಮನ ಹರಿಸಬೇಕು ಸಮಯಕ್ಕೆ ಸರಿಯಾಗಿ ಉತ್ತಮ, ಮಿತ ಆಹಾರ ಸೇವಿಸಬೇಕು. ನಿತ್ಯ ಕನಿಷ್ಟ 6 ರಿಂದ 8 ಗಂಟೆ ಸುಖವಾದ ನಿದ್ರೆ ಮಾಡಬೇಕು. ನಿದ್ರೆಯೇ ಆರೋಗ್ಯದ ಮೂಲ ಮಂತ್ರ. ಕೆಲಸಕ್ಕೆ ಹೊರಡುವ ಮುನ್ನ ಒಂದು ನಿಮಿಷ ಧ್ಯಾನ ಮಾಡಬೇಕು.ಸಮಯ ಸಿಕ್ಕಾಗ ವ್ಯಾಯಾಮ ಮಾಡಬೇಕು ಎಂದು ಡಾ. ಕುಮಾರ್ ಸಾರಿಗೆ ಸಿಬ್ಬಂದಿಗೆ ಸಲಹೆ ನೀಡಿದರು.
ಪುನೀತ್ ರಾಜ್‌ಕುಮಾರ್ ಅವರಿಗೆ ಹೃದಯಾ ಘಾತವಾದಾಗ ಸುಮಾರು 25 ನಿಮಿಷಗಳ ಕಾಲ ಅವರನ್ನು ಖಾಸಗಿ ವಾಹನದಲ್ಲಿ ಕರೆದೊಯ್ಯಲಾಗಿದೆ. ಈ ಸಮಯದಲ್ಲಿ ಅವರೊಂದಿಗಿದ್ದ ಯಾರೊಬ್ಬರಿಗೂ ಪ್ರಥಮ ಚಿಕಿತ್ಸೆ ಅರಿವೇ ಇರಲಿಲ್ಲ. ಅವರಿಗೆ ಪ್ರಥಮ ಚಿಕಿತ್ಸೆ ಅರಿವಿದ್ದಿದ್ದರೆ ಪುನೀತ್ ಕುಸಿದು ಬಿದ್ದ ಕೂಡಲೇ ಸಿಪಿಆರ್ ಮಾಡಿದ್ದರೆ ಅವರು ಇಂದು ನಮ್ಮೊಂದಿಗೆ ಇರುತ್ತಿದ್ದರು ಎಂದು ಡಾ. ಕುಮಾರ್ ವಿಷಾದಿಸಿದರು.
ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಅಪಘಾತಗಳಿಂದಾಗಿ ದಿನಕ್ಕೊಂದು ಜೀವ ಹೋಗುತ್ತಿದೆ. ಈ ಪ್ರಮಾಣ ಕಡಿಮೆ ಮಾಡಬೇಕು. ಚಾಲಕ, ನಿರ್ವಾಹಕರಿಗೆ ಪ್ರಥಮ ಚಿಕಿತ್ಸೆ ಜ್ಞಾನವಿದ್ದರೆ ನೂರಾರು ಜೀವಗಳನ್ನು ಉಳಿಸಬಹುದು. ಪ್ರಥಮ ಚಿಕಿತ್ಸೆ ರಾಕೆಟ್ ಸೈನ್ಸ್ ಅಲ್ಲ. ಧೈರ್ಯ, ಸಮಯ ಪ್ರಜ್ಞೆ ಇದ್ದರೆ ಅಮಾಯಕರ ಪ್ರಾಣ ಉಳಿಸಬಹುದು ಎಂದರು.
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಹೆಬ್ಬಾಳ, ಭಾರತೀಯ ರೆಡ್‌ಕ್ರಾಸ್‌ನ ಪ್ರಧಾನ ಕಾರ್ಯದರ್ಶಿ ಆನಂದಜ್ಯೋತಿ, ನಿರ್ದೇಶಕರಾದ ಶ್ರೀಕಾಂತ ಬಗ್ಗಾರೆ, ಕುಮಾರ್, ಕರಿಬಸಪ್ಪ, ಸಂಯೋಜಕ ಎನ್.ಜಿ. ಶಿವಕುಮಾರ್, ಕೊಟ್ರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.