ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಪೊಲೀಸ್ ಸಿಬ್ಬಂದಿಗಳ ಕರ್ತವ್ಯ

ದಾವಣಗೆರೆ, ಡಿ. 20- ಸಂತ್ರಸ್ತ ಮಕ್ಕಳು ಮತ್ತು ಮಹಿಳೆಯರನ್ನು ಸಮಸ್ಯೆಯಿಂದ ಹೊರ ತಂದು ಪುನರ್ವಸತಿ ಕಲ್ಪಿಸುವುದು ಪೊಲೀಸ್ ಮತ್ತು ಮಹಿಳಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆದ್ಯ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ನೊಂದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಂತ್ರಸ್ತ ಮಗು ಅಥವಾ ಮಹಿಳೆ ಠಾಣೆಗೆ ಬಂದು ದೂರು ನೀಡಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ. ಅವರನ್ನು ಕೌನ್ಸಿಲ್‌ಗೆ ಒಳಪಡಿಸಿ ಸಮಸ್ಯೆಯಿಂದ ಹೊರ ತಂದು ಪುನರ್ವಸತಿ ಕಲ್ಪಿಸಿ, ಸ್ವತಂತ್ರವಾಗಿ ನಿಲ್ಲುವಂತೆ ಮಾಡುವುದು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆದ್ಯತೆಯಾಗಬೇಕು ಎಂದರು.

ಮಕ್ಕಳ ಸಹಾಯವಾಣಿಗೆ ಕರೆ ಬಂದಾಗ ಎಷ್ಟೋ ಸಲ ಉದಾಸೀನ ಮಾಡುವುದು, ಬಂದ ದೂರನ್ನು  ಅರ್ಧಕ್ಕೆ ಬಿಡುವುದು ಸರಿಯಲ್ಲ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ಗೊತ್ತಾಗುವುದಿಲ್ಲ. ಅದು ಅರಿವಿಗೆ ಬರುವಷ್ಟರಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದು ಹೋಗಿ ಬಿಡುತ್ತದೆ. ಆದ್ದರಿಂದ ಮಕ್ಕಳ ವಿಚಾರದಲ್ಲಿ ಯಾರೂ ಉದಾಸೀನ ಮಾಡದೇ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣನವರ, ಎಎಸ್ಪಿಗಳಾದ ವಿಜಯಕುಮಾರ್‌ ಎಂ. ಸಂತೋಷ್, ಜಿ. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾ ನಾಯ್ಕ, ಡಿವೈಎಸ್ಪಿಗಳಾದ ಬಿ.ಎಸ್. ಬಸವರಾಜ್, ಮಲ್ಲೇಶ ದೊಡ್ಡಮನಿ ಉಪಸ್ಥಿತರಿದ್ದರು. ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಾಧಾರ ಕೇಂದ್ರ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!