ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾ ಶಾಖೆ ವತಿಯಿಂದ 2024-25 ನೇ ಸಾಲಿನ 14 ರಿಂದ 17 ವರ್ಷದ ವಯೋಮಿತಿ ಒಳಗಿನ ಬೆಂಗಳೂರು ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟನೆ ನೆರವೇರಿಸಲಿದ್ದು, ಪ್ರಾಥಮಿಕ, ಪ್ರೌಢ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ. ಗೌಡ, ಜಿಲ್ಲೆಯ ಶಾಸಕರುಗಳು, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರ ಸ್ವಾಮಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.