ದಾವಣಗೆರೆ, ಡಿ.19- ಜಿಲ್ಲಾ ವರದಿಗಾರರ ಕೂಟದಿಂದ 3ನೇ ವರ್ಷದ ಪಿಪಿಎಲ್-2ಕೆ24ನ್ನು ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಾಡಿದ್ದು ದಿನಾಂಕ 21ರಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಿಗ್ಗೆ 7.30ಕ್ಕೆ ಎಸ್ಪಿ ಉಮಾ ಪ್ರಶಾಂತ್ ಪಂದ್ಯಾವಳಿ ಉದ್ಘಾಟಿಸುವರು. ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ನಿಕಟ ಪೂರ್ವ ಅಧ್ಯಕ್ಷರಾದ ಕೆ.ಏಕಾಂತಪ್ಪ, ಎಂ.ಎಸ್.ವಿಕಾಸ್, ಜಿ.ಎಂ.ಆರ್.ಆರಾಧ್ಯ, ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ದಿನಾಂಕ 22ರ ಬೆಳಿಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ 2ನೇ ದಿನದ ಪಂದ್ಯಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಪಿಪಿಎಲ್-24ಗೆ ನಗದು ಬಹುಮಾನ ನೀಡುತ್ತಿರುವುದು ವಿಶೇಷ. ಕೂಟದಿಂದ ನಾಲ್ಕು ತಂಡಗಳಿಗೆ ರಾಜ್ಯದ ಪ್ರಸಿದ್ಧ ರಾಜ ವಂಶಗಳ ಹೆಸರು ಇಡಲಾಗಿದೆ ಎಂದರು. ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ್, ಖಜಾಂಚಿ ಪವನ ಐರಣಿ, ಪಿಆರ್‌ಒ ಪಿ.ಎಸ್.ಲೋಕೇಶ್ ಇತರರು ಈ ಸಂದರ್ಭದಲ್ಲಿದ್ದರು.